More

    ಟೀಕೆಗೆ ಕೆಲಸದಿಂದ ಉತ್ತರ ನೀಡಿದ್ದೇವೆ

    ಮುಳಬಾಗಿಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿಕರಿಗೆ, ಬಡವರಿಗೆ ಸಾಲ ವಿತರಣೆ ಮಾಡುವ ಮೂಲಕ ಎಲ್ಲ ರೈತರನ್ನು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ತಾಲೂಕಿನ ಕುರುಡುಮಲೆ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ಉತ್ತನೂರು ವಿಎಸ್‌ಎಸ್‌ಎನ್ ಸಹಕಾರ ಬ್ಯಾಂಕಿನಿಂದ ಆಯೋಜಿಸಿದ್ದ ಕುರುಡುಮಲೆ ವ್ಯಾಪ್ತಿಯ 27 ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ 1.10 ಕೋಟಿ ರೂ. ಸಾಲವನ್ನು ಡೆಬಿಟ್ ಕಾರ್ಡ್‌ಗಳ ಮೂಲಕ ವಿತರಿಸಿ ಮಾತನಾಡಿ, ಕುರುಡುಮಲೆ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಪಡೆದ ಸಾಲವನ್ನು ಮರುಪಾವತಿ ಮಾಡಿ ಈಗ ಮತ್ತೊಮ್ಮೆ ಸಾಲ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ಕರೊನಾ ಸಂಕಷ್ಟದ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಲಾಭದಲ್ಲಿದ್ದು, ಇದಕ್ಕೆ ಆಡಳಿತ ಮಂಡಳಿಯ ಜನಪರ ಮತ್ತು ಸಹಕಾರ ಮೌಲ್ಯಗಳ ಅನುಷ್ಠಾನವೇ ಕಾರಣ. ಬ್ಯಾಂಕ್ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಮಹಿಳೆಯರಿಗೆ, ರೈತರಿಗೆ ರಿಯಾಯಿತಿ ಮತ್ತು ಶೂನ್ಯಬಡ್ಡಿಯಲ್ಲಿ ಸಾಲ ನೀಡುವ ಮೂಲಕ ಆರ್ಥಿಕವಾಗಿ ಮುನ್ನಡೆಯುವಂತೆ ಮಾಡಿದೆ. ಇದನ್ನು ಸಹಿಸದ ಕೆಲ ಶಕ್ತಿಗಳು ಆರೋಪಗಳಿಗೆ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸುವ ಮೂಲಕ ತಕ್ಕ ಉತ್ತರ ನೀಡಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆದು ಠೇವಣಿ ಮತ್ತು ವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.

    ದುಗ್ಗಸಂದ್ರ ಜಿಪಂ ಮಾಜಿ ಸದಸ್ಯ ಉತ್ತನೂರು ವಿ.ಎಸ್.ಅರವಿಂದ್‌ಕುಮಾರ್ ಮಾತನಾಡಿ, ಕರೊನಾ 1 ಮತ್ತು 2ನೇ ಅಲೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. 3ನೇ ಅಲೆ ಶೀಘ್ರ ಬರಲಿದೆ ಎಂದು ತಜ್ಞರು ಮಾಹಿತಿ ನೀಡುತ್ತಿರುವುದರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ 2 ಡೋಸ್ ಕರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಉತ್ತನೂರು ವಿಎಸ್‌ಎಸ್‌ಎನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್ ಮಾತನಾಡಿ, ಕಳೆದ 4 ವರ್ಷಗಳ ಹಿಂದೆ ಉತ್ತನೂರು ವಿಎಸ್‌ಎಸ್‌ಎನ್ 60 ಲಕ್ಷ ಸುಸ್ತಿಯಲ್ಲಿದ್ದು ನಷ್ಟಕ್ಕೆ ಒಳಗಾಗಿತ್ತು. ನೂತನವಾಗಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ 4 ವರ್ಷದಲ್ಲಿ 19 ಕೋಟಿ ರೂ. ವಹಿವಾಟು ನಡೆಸಿದ್ದು, ಈಗ 12 ಲಕ್ಷ ಲಾಭದಲ್ಲಿದೆ. ಕುರುಡುಮಲೆ ವಿಎಸ್‌ಎಸ್‌ಎನ್ ಮುಚ್ಚಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಶೂನ್ಯಬಡ್ಡಿ ಮತ್ತು ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಪುನಶ್ಚೇತನ ವಿಎಸ್‌ಎಸ್‌ಎನ್‌ಗಳ ಆಡಳಿತ ಮಂಡಳಿಗಳ ಸಕ್ರಿಯತೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ವಿ.ವಿವೇಕಾನಂದಗೌಡ, ಕುರುಡುಮಲೆ ಗ್ರಾಪಂ ಅಧ್ಯಕ್ಷ ಜಿ.ರವಿಗೌಡ, ಗ್ರಾಪಂ ಸದಸ್ಯರಾದ ವಿನಾಯಕ, ಭಾರತಿ, ಗಣೇಶ್, ಜಾವೀದಾತಾಜ್, ಜಯಮ್ಮವೆಂಕಟರಾಮಪ್ಪ, ಚೆಲುವನಾಯಕನಹಳ್ಳಿ ವೆಂಕಟರಾಮಪ್ಪ, ಸಿದ್ಧಘಟ್ಟ ರಾಜೂಗೌಡ, ಸುಕನ್ಯಾ ಸೋಮಶೇಖರ್, ಮಾಜಿ ಸದಸ್ಯ ಚೋಟೂಸಾಬ್, ವಿಎಸ್‌ಎಸ್‌ಎನ್ ನಿರ್ದೇಶಕ ರಾಮಾಪುರ ಈರಪ್ಪರೆಡ್ಡಿ, ಕಾರ್ಯದರ್ಶಿ ಸುಬ್ರಮಣಿ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಲ್.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts