More

    ಟಿಪ್ಪರ್ ಅಡ್ಡಗಟ್ಟಿ ಪ್ರತಿಭಟನೆ, ರೊಚ್ಚಿಗೆದ್ದ ಬಳ್ಳೂರು ಗ್ರಾಮಸ್ಥರಿಂದ ಸ್ತಬ್ಧವಾದ 350ಕ್ಕೂ ಹೆಚ್ಚು ಲಾರಿಗಳು

    ಆನೇಕಲ್: ಅತ್ತಿಬೆಲೆ ಸಮೀಪದ ಬಳ್ಳೂರು ಬಳಿ ಟಿಪ್ಪರ್ ಹಾವಳಿಯಿಂದಾಗಿ ರಸ್ತೆ ಹಾಳಾಗಿ ಪದೇಪದೆ ಅಪಘಾತ ಸಂಭವಿಸುತ್ತಿರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮಂಗಳವಾರ ಟಿಪ್ಪರ್‌ಗಳನ್ನು ತಡೆದು ಪ್ರತಿಭಟಿಸಿದರು.

    ಇದರಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಜಲ್ಲಿಕಲ್ಲು ಹಾಗೂ ಎಂ. ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದ 350ಕ್ಕೂ ಲಾರಿಗಳು ರಸ್ತೆಯಲ್ಲೇ ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.

    ತಮಿಳುನಾಡಿನಿಂದ ಪ್ರತಿದಿನ ಒಂದೂವರೆ ಸಾವಿರಕ್ಕೂ ಹೆಚ್ಚು ಟಿಪ್ಪರ್‌ಗಳು ಕರ್ನಾಟಕಕ್ಕೆ ಬರುತ್ತವೆ. ಈ ಪೈಕಿ ಬಹುತೇಕ ಲಾರಿಗಳು ಹೆಚ್ಚು ಭಾರ ಹಾಕಿಕೊಂಡು ಸಂಚರಿಸುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ತಾಪಂ ಮಾಜಿ ಸದಸ್ಯ ಎನ್.ಎಂ.ಆರ್ ಮಂಜುನಾಥ್‌ರೆಡ್ಡಿ ದೂರಿದರು.

    ರಸ್ತೆ ಹದಗೆಟ್ಟ ಪರಿಣಾಮ ಅಪಘಾತ ಪ್ರಕರಣಗಳೂ ಹೆಚ್ಚಿದ್ದು, ವಾರದಲ್ಲಿ ಮೂರಕ್ಕೂ ಹೆಚ್ಚು ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಳ್ಳೂರು ಗ್ರಾಪಂ ಅಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ, ಟಿವಿಎಸ್ ಕ್ರಾಸ್‌ನಿಂದ ಬಳ್ಳೂರು ಮೂಲಕ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಎರಡು ವರ್ಷಗಳ ಹಿಂದೆ ಮೂರು ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಪ್ರತಿದಿನ ಅತಿ ಹೆಚ್ಚು ಭಾರ ಹಾಕಿಕೊಂಡು ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದೆ ಎಂದರು.
    ಗುಂಡಿಬಿದ್ದ ರಸ್ತೆಗೆ ಜಲ್ಲಿ ತುಂಬುವುದಾಗಿ ಲಾರಿ ಮಾಲೀಕರ ಅಸೋಸಿಯೇಷನ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

    ಕ್ರಮ ಕೈಗೊಳ್ಳದ ಆರ್‌ಟಿಒ ಅಧಿಕಾರಿಗಳು: ಪ್ರತಿಭಟನೆ ಸ್ಥಳಕ್ಕೆ ಅತ್ತಿಬೆಲೆ ಆರ್‌ಟಿಒ ಅಧಿಕಾರಿಗಳು ಆಗಮಿಸಿದರು. ಅತಿ ಹೆಚ್ಚು ಭಾರವನ್ನು ಹಾಕಿಕೊಂಡು ಬಂದಿದ್ದ ಲಾರಿಗಳು ಕಣ್ಣಮುಂದೆಯೇ ಇದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಇದ್ದದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಒತ್ತಡಕ್ಕೆ ಮಣಿದ ಅಧಿಕಾರಿಗಳು, ಹೆಚ್ಚು ಭಾರಹಾಕಿಕೊಂಡು ಬರುವ ವಾಹನಗಳ ತಪಾಸಣೆ ಮಾಡಿ, ದೂರು ದಾಖಲಿಸುವುದಾಗಿ ಹೇಳಿದರು.

    ಆರ್‌ಟಿಒ ಅಧಿಕಾರಿಗಳಿಗೆ ಲಂಚ ಕೊಡ್ತೇವೆ: ಆರ್‌ಟಿಒ ಅಧಿಕಾರಿಗಳಿಗೆ ನಾವು ಪ್ರತಿ ತಿಂಗಳು ಲಂಚ ನೀಡುತ್ತೇವೆ. ನಮಗೆ ಯಾವುದೇ ರೀತಿಯ ಭಯ ಇಲ್ಲ ಎಂದು ಪ್ರತಿಭಟನೆ ಜಾಗದ ಆಣತಿ ದೂರಲ್ಲೇ ಲಾರಿ ಮಾಲೀಕರು ಮಾತನಾಡುತ್ತಿದ್ದ ದೃಶ್ಯವೂ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts