More

    ಟಿಎಸ್​ಎಸ್​ನಿಂದ ಅಗತ್ಯ ಸೇವೆ ಸ್ಥಗಿತ

    ಶಿರಸಿ: ಲಾಕ್​ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೆ ದಿನಸಿ, ಔಷಧ ಪೂರೈಸಿ ಸಾರ್ವಜನಿಕರ ನೆಮ್ಮದಿಗೆ ಕಾರಣವಾಗಿದ್ದ ಇಲ್ಲಿನ ಟಿಎಸ್​ಎಸ್ (ತೋಟಗಾರ್ಸ್ ಸೇಲ್ಸ್ ಸೊಸೈಟಿ) ಸಂಸ್ಥೆಯು ತಾಲೂಕು ಆಡಳಿತವು ನೀಡಿದ ಆದೇಶದ ಮೇರೆಗೆ ಸೇವೆ ಸ್ಥಗಿತಗೊಳಿಸಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಲಾಕ್​ಡೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಟಿಎಸ್​ಎಸ್ ಸಂಸ್ಥೆಯು ತನ್ನ ಸೂಪರ್ ಮಾರ್ಕೆಟ್ ಮೂಲಕ ತನ್ನ ಸದಸ್ಯರಿಗೆ ಜೀವನಾವಶ್ಯಕ ಹಾಗೂ ಕೃಷಿ ಸಂಬಂಧಿ ವಸ್ತುಗಳನ್ನು, ಹಣಕಾಸಿನ ನೆರವನ್ನು ಒದಗಿಸಿತ್ತು. ಇದರಿಂದ ಸದಸ್ಯರು, ಗ್ರಾಹಕರಿಗೆ ಅಪಾರವಾದ ಅನುಕೂಲವಾಗಿತ್ತು. ಹೀಗಿದ್ದರೂ, ಈ ಸೇವೆ ಸ್ಥಗಿತಗೊಳಿಸುವಂತೆ ಈಗ ಅಧಿಕಾರಿಗಳು ನೋಟಿಸ್ ನೀಡಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎನ್ನಲಾಗಿದೆ.

    ಕಾರಣ ಕೇಳಿದ ಆಡಳಿತ: ಜೀವನಾವಶ್ಯಕ ವಸ್ತುಗಳಲ್ಲದೆ, ಇತರೆ ವಸ್ತುಗಳನ್ನು ಮಾರಾಟ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಅವರು ಟಿಎಸ್​ಎಸ್ ಸಂಸ್ಥೆಯ ಅನುಮತಿ ಪತ್ರ ರದ್ದುಪಡಿಸಬಾರದೇಕೆ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಇದರ ಬೆನ್ನಿಗೇ ಸಂಸ್ಥೆಯು ತನ್ನ ಸಂಪೂರ್ಣ ವ್ಯವಹಾರ ಸ್ಥಗಿತಗೊಳಿಸಿದೆ. ಹೀಗಾಗಿ, ದಿನಸಿ, ಔಷಧ ಹಾಗೂ ಇತರ ಜೀವನಾವಶ್ಯಕ ವಸ್ತುಗಳ ಖರೀದಿಗೆ ಸಂಸ್ಥೆಗೆ ಬಂದ ಗ್ರಾಹಕರು ಬಾಗಿಲು ಮುಚ್ಚಿದ್ದನ್ನು ಕಂಡು ವಾಪಸ್ ಆಗುತ್ತಿದ್ದಾರೆ.

    ಕೃಷಿ, ಕಿರಾಣಿ, ಹೈನುಗಾರಿಕೆಗೆ ಸಂಬಂಧಿಸಿದ ವಸ್ತುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ತುರ್ತು ಪರಿಸ್ಥಿತಿ ಅವಲೋಕಿಸಿ ಇತರ ಸಾಮಗ್ರಿ ನೀಡಲಾಗಿದೆ. ಆದರೆ, ಅಧಿಕಾರಿಗಳು ಇದನ್ನರಿಯದೆ ನೋಟಿಸ್ ನೀಡಿದ್ದಾರೆ. ಹೀಗಾಗಿ ವ್ಯವಹಾರಗಳನ್ನು ನಡೆಸುವಂತೆ ಜಿಲ್ಲಾಧಿಕಾರಿಯಿಂದ ಲಿಖಿತ ಆದೇಶ ಬರುವವರೆಗೂ ಜೀವನಾವಶ್ಯಕ ಕಿರಾಣಿ ವಸ್ತುಗಳು ಲಭ್ಯವಿಲ್ಲ. ಅತ್ಯವಶ್ಯಕ ಕೃಷಿ ಸಂಬಂಧಿಸಿದ ವಸ್ತುಗಳೂ ದೊರಕುವುದಿಲ್ಲ. ಔಷಧ ವಿಭಾಗವು ಸಹ ಕಾರ್ಯನಿರ್ವಹಿಸುವುದಿಲ್ಲ. ಅಕ್ಕಿ ಗಿರಣಿ ವಿಭಾಗದಲ್ಲಿಯೂ ಮಿಲ್ಲಿಂಗ್ ವ್ಯವಸ್ಥೆ ಇರುವುದಿಲ್ಲ. ರೈತರಿಗೆ ಹಣಕಾಸಿನ ವ್ಯವಸ್ಥೆ ಸಹಿತ ಯಾವುದೇ ಕಚೇರಿಯ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಆದೇಶದಂತೆ ಈ ಅನಿವಾರ್ಯವಾದ ನಿರ್ಧಾರ ತೆಗೆದುಕೊಂಡಿದ್ದೇವೆ.
    | ರವೀಶ ಹೆಗಡೆ ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

    ಲಾಕ್​ಡೌನ್ ಸಂದರ್ಭದಲ್ಲಿ ಬೇರೆಲ್ಲೂ ದಿನಸಿ ಸಿಗದ ಸಂದರ್ಭದಲ್ಲಿ ದೂರದ ಬಕ್ಕಳದಿಂದ ವಾಹನ ಮಾಡಿಸಿಕೊಂಡು ದಿನಸಿಗಾಗಿ ಸಂಸ್ಥೆಗೆ ಬಂದಿದ್ದೆ. ಆದರೆ, ಸರ್ಕಾರದ ನಿರ್ದೇಶನದಂತೆ ಸಂಸ್ಥೆಯ ಬಾಗಿಲು ಮುಚ್ಚಿದೆ. ದಿನಸಿಯಿಲ್ಲದೆ ಗ್ರಾಮೀಣ ಭಾಗದವರ ಬದುಕು ದುಸ್ತರವಾಗುತ್ತದೆ. ಇದು ಅಧಿಕಾರಿಗಳ ಮಿತಿಮೀರಿದ ವರ್ತನೆಯಾಗಿದೆ.
    ಸಿ.ಆರ್.ಹೆಗಡೆ ಬಕ್ಕಳ
    ಗ್ರಾಮೀಣ ಭಾಗದ ನಾಗರಿಕ

    ಲಾಕ್​ಡೌನ್ ಹಿನ್ನೆಲೆಯಲ್ಲಿ ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಟಿಎಸ್​ಎಸ್ ಸೂಪರ್ ಮಾರ್ಕೆಟ್​ಗೆ ಅನುಮತಿ ನೀಡಲಾಗಿತ್ತು. ಆದರೆ, ಸಂಸ್ಥೆಯು ಜೀವನಾವಶ್ಯಕವಲ್ಲದ ವಸ್ತುಗಳನ್ನು ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ಅರ್ಜಿ ಬಂದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಆದೇಶ ಪಾಲಿಸದ ಕಾರಣ ಸಂಸ್ಥೆಯ ಪರವಾನಗಿಯನ್ನು ಏಕೆ ರದ್ದುಪಡಿಸಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
    ಡಾ. ಈಶ್ವರ ಉಳ್ಳಾಗಡ್ಡಿ- ಉಪವಿಭಾಗಾಧಿಕಾರಿ

    ಹಲವುಗಳ ತಾಲೂಕುಗಳಿಗೆ ಸೇವೆ: ಲಾಕ್​ಡೌನ್ ಸಂದರ್ಭದಲ್ಲಿ ತಾಲೂಕು ಮಾತ್ರವಲ್ಲದೆ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ ತಾಲೂಕುಗಳ ಗ್ರಾಮೀಣ ಭಾಗಕ್ಕೆ ಅಗತ್ಯ ವಸ್ತುಗಳನ್ನು ಟಿ.ಎಸ್.ಎಸ್. ಪೂರೈಸುತ್ತಿತ್ತು. ಶಿರಸಿಯ 25 ಹಳ್ಳಿಗಳ ಸಹಕಾರಿ ಸಂಘಗಳು, ಗ್ರಾಮ ಪಂಚಾಯಿತಿ ಮೂಲಕ 15ಕ್ಕೂ ಹೆಚ್ಚಿನ ವ್ಯಾಪಾರಿಗಳು, ಆನ್​ಲೈನ್ ಮೂಲಕ 150ಕ್ಕೂ ಹೆಚ್ಚು ಗ್ರಾಹಕರು, ವಾಟ್ಸಪ್ ಮೂಲಕ 100ಕ್ಕೂ ಹೆಚ್ಚು ಸೇರಿ ಒಟ್ಟು 3 ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯವೂ ದಿನಸಿ, ಔಷಧ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಲಾಗುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts