More

    ಜ್ಞಾನ ದಾಸೋಹ ಶಿಬಿರದಲ್ಲಿ ಎಲ್ಲರ ಸೇವೆ ಸ್ಮರಣೀಯ

    ಶ್ರೀರಂಗಪಟ್ಟಣ: ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಉಚಿತ ಜ್ಞಾನ ದಾಸೋಹ ಶಿಬಿರ ನೀಡಿದ ಸೇವೆ ಸ್ಮರಣೀಯ ಎಂದು ಗ್ರಾಪಂ ಅಧ್ಯಕ್ಷ ಜಗದೀಶ್ ಶ್ಲಾಘಿಸಿದರು.

    ತಾಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

    ಪ್ರಸ್ತುತ ಸಮಾಜದಲ್ಲಿ ಹಣ ಗಳಿಸಿ ಹೆಸರು ಮಾಡುವ ಶಿಕ್ಷಣ ತರಬೇತಿ ಕೇಂದ್ರಗಳ ನಡುವೆ ಯಾವುದೇ ಪ್ರತಿಫಲಾಪೇಕ್ಷೆ ಇರದೆ ಪ್ರಜ್ಞಾವಂತಿಕೆಯ ಸಮಾನ ಮನಸ್ಕರ ತಂಡವೊಂದು ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿಯ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ದಾಸೋಹ ನೀಡಿ ಈ ಭಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗಳಿಸಿ ಯಶಸ್ವಿಯಾಗಲು ಕಾರಣರಾದ ಪ್ರತಿಯೊಬ್ಬರ ಪರಿಶ್ರಮ ಸ್ಮರಣೀಯ ಎಂದರು.

    ಇಂದು ನಿಮ್ಮ ಶಿಕ್ಷಣ ತರಬೇತಿ ಕೇಂದ್ರದ ಜತೆಗೆ ನಮ್ಮ ಗ್ರಾಮ ಪಂಚಾಯಿತಿ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಸಹಕಾರವನ್ನು ಸಮಾಜದ ಮುಂದೆ ತಿಳಿಸಿಕೊಡುವಲ್ಲಿ ಎಲ್ಲರ ಪಾತ್ರ ಅವಿಸ್ಮರಣೀಯ. ಇದರೊಂದಿಗೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬರುವ ಪುರಾತನ ಕುರುಹುಗಳಾದ ವೀರಗಲ್ಲು ಮಾಸ್ತಿ ಕಲ್ಲುಗಳನ್ನು ಸಂರಕ್ಷಿಸಿ ಉಳಿಸುವುದು ಹಾಗೂ 60% ಅಂಕಗಳಿಸಿರುವ ಎಸ್ಸಿ ,ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉನ್ನತ ಶಿಕ್ಷಣ ಸಹಕಾರ ನೀಡುವುದು ಮುಂದಿನ ದಿನಗಳಲ್ಲಿ ನಮ್ಮ ಕರ್ತವ್ಯವಾಗಬೇಕು ಎಂದರು.

    ಪಂಚಾಯಿತಿ ಸದಸ್ಯ ನೆಲಮನೆ ಪ್ರಭಾಕರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಹಕ್ಕುಪತ್ರ ಪಡೆಯಲು ತಾಲೂಕು ಕೇಂದ್ರಗಳಿಗೆ ಸಾಕಷ್ಟು ಪರದಾಡುತ್ತಿದ್ದು, ಈ ಸೇವೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.

    ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 624ಅಂಕ ಗಳಿಸಿದ ಕೂಡಲಕುಪ್ಪೆ ಗ್ರಾಮದ ವಿದ್ಯಾರ್ಥಿನಿ ಖುಷಿಕಾ ಅವರನ್ನು ಸನ್ಮಾನಿಸಲಾಯಿತು.

    ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಉಚಿತ ಶಿಕ್ಷಣ ಮೂಲಕ ತರಬೇತಿ ನೀಡಿದ ಗ್ರಂಥಾಲಯ ಮೇಲ್ವಿಚಾರಕ ಕೂಡಲಕುಪ್ಪೆ ಸೋಮಶೇಖರ್, ಕರಿಯಪ್ಪ ಲೇಬಗಿರಿ, ಕದಲಗೆರೆ ಜಯರಾಮು, ಮೈಸೂರಿನ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಎಸ್.ಪ್ರಾಣೇಶ್, ಲೋಕಾಯುಕ್ತ ಇಲಾಖೆಯ ಸಿಬ್ಬಂದಿ ಕೆ.ಎಸ್.ಆದರ್ಶ, ಮಹಾಲಕ್ಷ್ಮೀ ಪ್ರೌಢಶಾಲೆಯ ಆಂಗ್ಲ ಶಿಕ್ಷಕ ರವಿಕುಮಾರ್, ಶ್ರೀರಂಗಪಟ್ಟಣ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶಶಿಧರ್ ಹಾಗೂ ಸೆಸ್ಕ್ ಸಿಬ್ಬಂದಿ ಜಯಪ್ರಕಾಶ್, ಉಚಿತ ಆಹಾರ ಕಲ್ಪಿಸಿದ ಗುತ್ತಿಗೆದಾರ ರಾಜೇಶ್ ಹಾಗೂ ಮಾರ್ಗದರ್ಶನ ನೀಡಿದ ಜಿಲ್ಲಾ ಪಂಚಾಯಿತಿ ಆಡಳಿತ ಉಪ ಕಾರ್ಯದರ್ಶಿ ಎಂ.ಬಾಬು ಅವರನ್ನು ಸನ್ಮಾನಿಸಲಾಯಿತು.

    ಈ ವೇಳೆ ಗ್ರಾಪಂನ ಉಪಾಧ್ಯಕ್ಷೆ ಸಂಪೂರ್ಣ, ಸದಸ್ಯರಾದ ಯೋಗೇಶ್, ಮಲ್ಲೇಶಚಾರಿ, ಸೋಮಶೇಖರ್, ರಾಚಯ್ಯ, ಚಿಕ್ಕಿರಶೆಟ್ಟಿ, ಜವರೇಗೌಡ, ನೆಲಮನೆ ಪ್ರಭಾಕರ್, ಪ್ರೀತಿ, ಸಾವಿತ್ರಿ, ಭವ್ಯ, ರಶ್ಮಿ, ತುಳಸಿ, ಸವಿತಾ, ನಿರ್ಮಲಾ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಪುನೀತ್, ಅರುಣ್, ಸಂಜಯ್, ಮಹೇಶ್, ಮನೋಹರ್ ಸೇರಿದಂತೆ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts