More

    ಜೊಯಿಡಾ ಮೂಲದ ವ್ಯಕ್ತಿಗೆ ಕರೊನಾ; ಕಾರವಾರ, ಮಾಜಾಳಿಯಲ್ಲಿ ಓಡಾಟ

    ವಿಜಯವಾಣಿ ಸುದ್ದಿಜಾಲ ಕಾರವಾರ/ಪಣಜಿ: ಕಾರವಾರ ಮಾಜಾಳಿ ತನಿಖಾ ಠಾಣೆಯಿಂದ ಗೋವಾ ಪ್ರವೇಶಿಸಿದ್ದ ಜೊಯಿಡಾ ಮೂಲದ ವ್ಯಕ್ತಿಗೆ ಕರೊನಾ ಇರುವುದು ಖಚಿತವಾಗಿದ್ದು, ಕಾರವಾರ, ಜೊಯಿಡಾ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

    ಮೇ 14ರಂದು ಮಾಜಾಳಿ-ಪೊಳೆಂ ತನಿಖಾ ಠಾಣೆಯ ಮೂಲಕ ಗೋವಾ ಪ್ರವೇಶಿಸಿದ್ದ ಜೊಯಿಡಾ ತಾಲೂಕಿನ ಅಣಶಿ ಗ್ರಾಮದ 23 ವರ್ಷದ ಯುವಕನಲ್ಲಿ ಕರೊನಾ ಇರುವುದು ಖಚಿತವಾಗಿದೆ.

    ಗೋವಾದ ಔಷಧ ಕಂಪನಿಯ ಉದ್ಯೋಗದಲ್ಲಿದ್ದ ಈತನನ್ನು ಗೋವಾ ವಾಸ್ಕೊದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಗಂಟಲ ದ್ರವ ಪಡೆದು ಎಸ್​ಆರ್​ಎಲ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಕರೊನಾ ಇರುವುದು ಭಾನುವಾರ ಖಚಿತವಾಗಿದೆ. ಮಡಗಾಂವ ಇಎಸ್​ಐ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಣಜಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಯು ಕಾರವಾರಕ್ಕೆ ಬಂದು ಬೈಕ್​ಗೆ ಪೆಟ್ರೋಲ್ ತುಂಬಿಸಿಕೊಂಡಿದ್ದ ಎನ್ನಲಾಗಿದೆ. ಇನ್ನು ಮಾಜಾಳಿಗೆ ತೆರಳಿ ಅಲ್ಲಿನ ತನಿಖಾ ಠಾಣೆಯಲ್ಲಿ ಸುಮಾರು ಎರಡ್ಮೂರು ತಾಸು ಇದ್ದು ನಂತರ ಗೋವಾ ಪ್ರವೇಶಿಸಿದ್ದ. ಈ ಅವಧಿಯಲ್ಲಿ ಆತನ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕಾರ್ಯ ನಡೆದಿದೆ.

    ‘ಗೋವಾ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ನಾವು ಆತನ ಜತೆ ಮಾತುಕತೆ ನಡೆಸಿದ್ದು, ಆತನ ಕುಟುಂಬ ಹಾಗೂ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ, ಆರೋಗ್ಯ ಪರೀಕ್ಷೆ ನಡೆಸಿದ್ದೇವೆ. ಗಂಟಲ ದ್ರವದ ಮಾದರಿಯನ್ನು ಶೀಘ್ರದಲ್ಲಿ ಪರಿಶೀಲನೆ ನಡೆಸಲಿದ್ದೇವೆ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ರೋಗಿ ಯಾರು ಎಂಬ ಬಗ್ಗೆ ಗೊಂದಲ: ಕರೊನಾ ರೋಗಿ ಯಾರು ಎಂಬ ಬಗ್ಗೆ ಗೊಂದಲ ಉಂಟಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳದ ಒಂದೇ ಹೆಸರಿನ ಇಬ್ಬರ ಗಂಟಲ ದ್ರವದ ಮಾದರಿಯನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಒಟ್ಟಿಗೆ ಕಳಿಸಲಾಗಿತ್ತು. ಇದರಲ್ಲಿ ಒಬ್ಬರಿಗೆ ರೋಗ ಇರುವುದು ಮೇ 10ರಂದು ಖಚಿತವಾಗಿದೆ. ಇನ್ನೊಬ್ಬರಿಗೆ ನೆಗೆಟಿವ್ ಬಂದಿತ್ತು. ಆದರೆ, ಒಂದೇ ಹೆಸರಿನ ಇಬ್ಬರು ಇರುವುದರಿಂದ ರೋಗ ಯಾರಿಗಿದೆ ಎಂಬ ಗೊಂದಲದಲ್ಲಿ ಇಬ್ಬರನ್ನೂ ಭಟ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ, ಇಬ್ಬರ ಗಂಟಲ ದ್ರವದ ಮಾದರಿಯನ್ನು ಬೆಂಗಳೂರು ಹಾಗೂ ಪುಣೆಗೆ ಮರು ಪರೀಕ್ಷೆಗೆ ಕಳಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು, ಭಟ್ಕಳದ ಮೂಲದ 68 ವರ್ಷದ ವೃದ್ಧ (ಪಿ-1147)ರಲ್ಲಿ ರೋಗ ಇರುವ ಬಗ್ಗೆ ಆರೋಗ್ಯ ಇಲಾಖೆ ಖಚಿತಪಡಿಸಿದೆ.

    ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕಕ್ಕೆ ಬಂದು ಮೇ 5 ರಂದು ಕರೊನಾ ಖಚಿತವಾಗಿರುವ 18 ವರ್ಷದ ಯುವತಿ (ಪಿ-659)ಯಿಂದ ಆಕೆಯ ಸ್ನೇಹಿತೆಗೆ (ಪಿ.-740) ರೋಗ ಹರಡಿತ್ತು. ಈಗ ಆಕೆಯ ತಂದೆಗೆ (ಪಿ-1147) ರೋಗ ಹರಡಿರುವುದು ಪಕ್ಕಾ ಆಗಿದೆ.

    ಎರಡೆರಡು ಬಾರಿ ದಾಖಲು: 68 ವರ್ಷದ ವೃದ್ಧರಲ್ಲಿ (ಪಿ-783) ರೋಗ ಇರುವ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಮೇ 10 ರ ಹೆಲ್ತ್ ಬುಲೆಟಿನ್​ನಲ್ಲಿ ದಾಖಲಾಗಿದೆ. ಭಾನುವಾರ ಸಂಜೆಯ ಹೆಲ್ತ್ ಬುಲೆಟಿನ್​ನಲ್ಲಿ ಅದೇ ರೋಗಿಯ ಹೆಸರು (ಪಿ-1147) ಎಂದು ದಾಖಲಾಗಿದೆ. ಇದನ್ನು ಸರಿಪಡಿಸಲು ಆರೋಗ್ಯ ಇಲಾಖೆಗೆ ವಿನಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ರೋಗ ಖಚಿತವಾದ 68 ವರ್ಷದ ವೃದ್ಧರಿಗೆ ಈಗಾಗಲೇ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಅವರನ್ನು ಈಗ ಕಾರವಾರಕ್ಕೆ ಸ್ಥಳಾಂತರಿಸಿದ್ದು,ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯಲ್ಲಿ 41 ಪ್ರಕರಣ: ಜಿಲ್ಲೆಯಲ್ಲಿ ಸದ್ಯ 82 ಜನರಿಗೆ ಕರೊನಾ ಶಂಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೆ ಒಟ್ಟು 41 ಜನರಲ್ಲಿ ಕರೊನಾ ಸೋಂಕು ಕಂಡುಬಂದಿದ್ದು, 11 ಜನರು ಗುಣಮುಖರಾಗಿದ್ದಾರೆ. 30 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇದರಲ್ಲಿ 29 ಜನರನ್ನು ಕಾರವಾರ ಕ್ರಿಮ್್ಸ ಕೋವಿಡ್-19 ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    5 ಸಾವಿರಕ್ಕೂ ಅಧಿಕ ಜನ ಕ್ವಾರಂಟೈನ್​ನಲ್ಲಿ: ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸಿದ 5 ಸಾವಿರಕ್ಕೂ ಅಧಿಕ ಜನರನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    ಕಾರವಾರ-1104, ಅಂಕೋಲಾ -1048, ಕುಮಟಾ- 1248, ಹೊನ್ನಾವರ- 81, ಭಟ್ಕಳ- 472, ಶಿರಸಿ- 75, ಸಿದ್ದಾಪುರ-111, ಯಲ್ಲಾಪುರ- 140, ಮುಂಡಗೋಡ- 575, ಹಳಿಯಾಳ- 540, ಜೊಯಿಡಾ-37 ಜನ ಸೇರಿ ಒಟ್ಟು 5,467 ಜನರು ಕ್ವಾರಂಟೈನ್​ನಲ್ಲಿದ್ದು, ಅವರಲ್ಲಿ 4,546 ಜನರು ಈಗಾಗಲೇ 14 ದಿನವನ್ನು ಪೂರ್ಣಗೊಳಿಸಿದ್ದಾರೆ. 921 ಜನರು 14ರಿಂದ 28 ದಿನಗಳ ನಡುವೆ ಇದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts