More

    ಜೈವಿಕ ಉದ್ಯಾನಗಳ ಆರಂಭಕ್ಕೆ ಆನ್‌ಲೈನ್ ಸರ್ವೇ; ಸರ್ಕಾರದ ಸಮ್ಮತಿ ಬಳಿಕ 9 ಮೃಗಾಲಯ ಕಾರ್ಯಾರಂಭ ಜೂ.8 ರ ಬಳಿಕ ಉದ್ಯಾನ ಮುಕ್ತ?

    ಶಿವರಾಜ ಎಂ. ಬೆಂಗಳೂರು: ರಾಜ್ಯದ ಜೈವಿಕ ಉದ್ಯಾನಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಸಂಬಂಧ ಸರ್ಕಾರದ ಆದೇಶಕ್ಕೆ ಕಾಯುತ್ತಿರುವ ರಾಜ್ಯ ಮೃಗಾಲಯ ಪ್ರಾಧಿಕಾರ ಆನ್‌ಲೈನ್ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

    ಜೂ.8ರ ಬಳಿಕ ಉದ್ಯಾನಗಳು ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಸೂಕ್ತವಾದದ್ದನ್ನು ಅಳವಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

    ಕರ್ನಾಟಕ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಗೊಳಪಡುವ ಮೃಗಾಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅನುಮತಿ ಕೋರಿ ಪ್ರಾಧಿಕಾರ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಾವುದೇ ವೇಳೆ ಸರ್ಕಾರದ ಸಮ್ಮತಿ ದೊರಕಬಹುದೆಂಬ ನಿರೀಕ್ಷೆಯಲ್ಲಿ ಉದ್ಯಾನದ ಕಾರ್ಯನಿರ್ವಾಹಣಾ ನಿರ್ದೇಶಕರು ಪೂರ್ವ ಸಿದ್ಧತೆಯಲ್ಲಿದ್ದಾರೆ.

    ಆನ್‌ಲೈನ್ ಟಿಕೆಟ್ ಕಡ್ಡಾಯಕೇವಲ ಆನ್‌ಲೈನ್‌ನಲ್ಲಷ್ಟೆ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ ಅನ್ವಯ ಉದ್ಯಾನಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮೃಗಾಲಯ ವ್ಯಾಪ್ತಿಗೊಳಪಡುವ ಜೈವಿಕ ಉದ್ಯಾನಗಳು, ಮೃಗಾಲಯಗಳು, ಪಕ್ಷಿಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿ ಲಾಕ್‌ಡೌನ್ ಕಾರಣದಿಂದ ನಿರ್ವಹಣೆಗೂ ತೊಂದರೆಯಾಗಿದೆ. ಕರೊನಾ ಮುಂಜಾಗ್ರತೆಯೊಂದಿಗೆ ಉದ್ಯಾನಗಳ ಆರ್ಥಿಕ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಇಲಾಖೆ ಸನ್ನದ್ಧವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ತಿಳಿಸಿದ್ದಾರೆ.

    ಕೋಟ್ಯಂತರ ರೂ.ನಷ್ಟಜೈವಿಕ ಉದ್ಯಾನಗಳ ನಿರ್ಬಂಧದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೇ 7.5 ಕೋಟಿ ರೂ.ಆದಾಯಕ್ಕೆ ಕೊಕ್ಕೆ ಬಿದ್ದಿದ್ದು, ರಾಜ್ಯದಲ್ಲಿನ 9 ಮೃಗಾಲಯಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂ.ನಷ್ಟವಾಗಿದೆ.

    ಜೈವಿಕ ಉದ್ಯಾನಗಳ ಆರಂಭಕ್ಕೂ ಮುನ್ನಾ ಸಾರ್ವಜನಿಕರಿಂದ ಸಲಹೆ ಸೂಚನೆ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಉದ್ಯಾನ ಮುಕ್ತಗೊಳಿಸಲು ಸರ್ವ ಸಿದ್ಧತೆ ನಡೆಸಲಾಗಿದೆ.

    ವನಶ್ರೀ ವಿಪಿನ್‌ಸಿಂಗ್, ಕಾರ್ಯನಿರ್ವಹಣಾ ನಿರ್ದೇಶಕಿ, ಬನ್ನೇರುಘಟ್ಟ ಜೈವಿಕ ಉದ್ಯಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts