More

    ಜೇನುನೊಣ ಪೋಷಣೆಗೆ ಒತ್ತು ನೀಡಿ

    ಗೋಣಿಕೊಪ್ಪ: ಪರಾಗಸ್ಪರ್ಶದ ಮೂಲಕ ಆಹಾರ ಉತ್ಪಾದನೆ ಮೂಲ ಜೀವ ಸಂಪತ್ತು ಆಗಿರುವ ಜೇನುನೊಣ ಪೋಷಣೆಗೆ ಒತ್ತು ನೀಡಿ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತ ನಂದ ಮಹಾರಾಜ್ ಸಲಹೆ ನೀಡಿದರು.
    ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಶಿಕ್ಷಣ ವಿಸ್ತರಣಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಜೋನು ನೊಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಜೇನು ನೊಣ ಆಹಾರ ಉತ್ಪಾದನೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಅದರ ರಕ್ಷಣೆಯೂ ಮುಖ್ಯ. ಪ್ರಕೃತಿಯ ವಿಶೇಷ ಶಕ್ತಿಯಾಗಿರುವ ಜೇನು ಯಾವುದೇ ನಿರೀಕ್ಷೆಗಳಿಲ್ಲದೆ ಜೇನು ಉತ್ಪಾದನೆ, ಪರಾಗಸ್ಪರ್ಶ ಮಾಡುತ್ತವೆ. ಇಂತಹ ನಿಷ್ಠೆ ಅವಶ್ಯವಾಗಿದೆ. ಕವಿ, ಸಾಹಿತಿ, ಸ್ವಾಮಿ ವಿವೇಕಾನಂದರು ಜೇನು ನೊಣಗಳಿಗೆ ಮನಸೋತ ನಿದರ್ಶನಗಳು ಇವೆ ಎಂದರು.
    ಪ್ರಗತಿಪರ ಕೃಷಿಕ ರಾಣಾ ನಂಜಪ್ಪ ಮಾತನಾಡಿ, ಜೇನು ಕೊಯ್ಲು ಸಂದರ್ಭ ನೊಣಗಳನ್ನು ಕೊಲ್ಲುವ ಹಂತಕ್ಕೆ ಹೋಗಬಾರದು. ಒಂದು ನೊಣವೂ ಪ್ರಕೃತಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಸಾಕಣೆ ಮಾಡುವವರು ಅದರ ಕಾಲನಿಗಳ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಪೂರಕ ಹೂ ಬಿಡುವ ಗಿಡ ಮರಗಳ ಕೃಷಿಗೆ ಒತ್ತು ನೀಡಬೇಕಿದೆ. ಜೇನು ನೊಣಗಳೊಂದಿಗೆ ಸ್ನೇಹದಿಂದ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಅರಣ್ಯ ಮತ್ತು ಪ್ರಾಕೃತಿಕ ಸಂಪನ್ಮೂಲಕ ಘಟಕದ ಮುಖ್ಯಸ್ಥ ಡಾ.ಜಿ.ಎಂ.ದೇವಗಿರಿ ಮಾತನಾಡಿ, ಜೇನು ನೊಣಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿಸಿದರೆ ವಿಶ್ವವೇ ಆಹಾರ ಕಳೆದುಕೊಳ್ಳುವ ಆತಂಕವಿದೆ. ಜಿಲ್ಲೆಯ ಕಿತ್ತಳೆ, ಕಾಫಿ, ಜೇನು ವಿಶೇಷ ಆಹಾರಕ್ರಮಗಳಲ್ಲಿ ಒಂದಾಗಿವೆ. ಕೃಷಿಗೆ ಪೂರಕವಾಗಿರುವ ಜೇನು ಕೃಷಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
    ಅರಣ್ಯ ಮಹಾವಿದ್ಯಾಯದ ಮುಖ್ಯಸ್ಥ ಡಾ.ಚೆಪ್ಪುಡೀರ ಜಿ.ಕುಶಾಲಪ್ಪ ಮಾತನಾಡಿ, ಜೇನು ಕೃಷಿ ಮೂಲಕ ಯುವ ಸಮೂಹ ನೂತನವಾಗಿ ಸ್ವ ಉದ್ಯೋಗ ಕಂಡುಕೊಳ್ಳಬೇಕಿದೆ. ಕೊಡಗಿನ ಆಹಾರ ಕ್ರಮಗಳಲ್ಲಿ ಜೇನು ನೊಣಗಳ ಪಾತ್ರ ಅರಿತು, ಆಹಾರ ಉತ್ಪಾದನೆ ಮತ್ತು ಜೇನು ರಕ್ಷಣೆ ನಮ್ಮ ಮೂಲ ಕರ್ತವ್ಯವಾಗಬೇಕು ಎಂದರು.
    ಈ ಸಂದರ್ಭ ಜೇಣು ಕೃಷಿ ಉತ್ಪಾದನೆ, ಕಾಲನಿಗಳ ಪರಿಚಯ, ಜೇನು ಉತ್ಪಾದನೆಗೆ ಪೂರಕ ಮರಗಳ ಪರಿಚಯ, ಜೇನಿನಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಿತು. ಕೃಷಿಕ ಮಹಿಳೆ ದೀರ್ಘಕೇಶಿ ಶಿವಣ್ಣ ಪ್ರದರ್ಶನ ಮೇಳ ಉದ್ಘಾಟಿಸಿದರು. ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ. ಆರ್.ಎನ್.ಕೆಂಚರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts