More

    ಜೆಡಿಎಸ್ ಪುನಶ್ಚೇತನಕ್ಕೆ ತರಬೇತಿ ಕಾರ್ಯಾಗಾರ

    ಹುಬ್ಬಳ್ಳಿ: ನೆಲೆ ಇದ್ದರೂ ನಿಸ್ತೇಜಗೊಂಡಿರುವ ಜೆಡಿಎಸ್​ಗೆ ಪುನಶ್ಚೇತನ ನೀಡುವುದಕ್ಕಾಗಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು, ಕರಾವಳಿ ಮತ್ತು ಹಳೇ ಮೈಸೂರು ಜಿಲ್ಲೆಗಳಲ್ಲಿ ಕಾರ್ಯಕರ್ತರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ, ಮಾ. 7 ಹಾಗೂ 8ರಂದು ಹುಬ್ಬಳ್ಳಿ ಗೋಕುಲ ರಸ್ತೆಯ ವಾಸವಿ ಮಹಲ್​ನಲ್ಲಿ ಕಾರ್ಯಾಗಾರ ನಡೆಯಲಿದ್ದು, ಮುಂಬೈ ಕರ್ನಾಟಕದ 7 ಜಿಲ್ಲೆ ಹಾಗೂ ಹು-ಧಾ ಮಹಾನಗರ ಜಿಲ್ಲೆ ಸೇರಿದಂತೆ ಒಟ್ಟು 8 ಜಿಲ್ಲೆಗಳ ಆಯ್ದ ಕಾರ್ಯಕರ್ತರು ಪಾಲ್ಗೊಳ್ಳುವರು. ಮಾ. 7ರಂದು ಬೆಳಗ್ಗೆ 11ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಾರ್ಯಾಗಾರ ಉದ್ಘಾಟಿಸುವರು. ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ರಚಿಸಿದ ‘ಇಂದು ಭಾರತ ಮಾತನಾಡುತ್ತಿದೆ’ ಹಾಗೂ ದೇವೇಗೌಡರ ಅಧಿಕಾರದಲ್ಲಿ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಮಾಹಿತಿಯ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು. ನಂತರ ಜನತಾ ಪರಿವಾರದ ಹುಟ್ಟು, ಸಿದ್ಧಾಂತ ಮತ್ತು ಮೌಲ್ಯಗಳ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ಪಕ್ಷ ಕಟ್ಟುವ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

    ಮಾ. 8ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ದೇವೇಗೌಡ ಅವರು ಪ್ರತಿ ಜಿಲ್ಲೆಗಳ ಮುಖಂಡರೊಂದಿಗೆ ರ್ಚಚಿಸುವರು. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ. ಬಿ.ಬಿ. ಗಂಗಾಧರಮಠ, ಶಿವಣ್ಣ ಹುಬ್ಬಳ್ಳಿ, ಗುರುರಾಜ ಹುಣಸಿಮರದ ಮತ್ತಿತರರಿದ್ದರು.

    ಗಂಭೀರ ಸ್ವರೂಪ ತಾಳದ ಸರ್ಕಾರ: ಮಹದಾಯಿ ಯೋಜನೆಗೆ ಕನಿಷ್ಠ 2 ಸಾವಿರ ಕೋಟಿ ರೂ. ಮೀಸಲಿಡಬೇಕಿತ್ತು. ಆದರೆ, ಕೇವಲ 500 ಕೋಟಿ ರೂ. ನೀಡುವ ಮೂಲಕ ರಾಜ್ಯ ಸರ್ಕಾರ ಈ ವಿಷಯದಲ್ಲಿ ಗಂಭೀರ ಸ್ವರೂಪ ತಾಳಿಲ್ಲ ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮೂಲಕ ಬಹಿರಂಗಗೊಳಿಸಿದ್ದಾರೆ. ಜಿಎಸ್​ಟಿ ಹಾಗೂ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಒಟ್ಟು 34 ಸಾವಿರ ಕೋಟಿ ರೂ. ಖೋತಾ ಆಗಿದೆಯೆಂದು ಹೇಳುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ದತ್ತಾ ಟೀಕಿಸಿದರು.

    ವಿವಿಧೆಡೆ ಆಯೋಜನೆ: ಮುಂದಿನ ದಿನಗಳಲ್ಲಿ ರಾಯಚೂರು, ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕ ಜಿಲ್ಲೆಗಳ, ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಮಧ್ಯ ಕರ್ನಾಟಕ ಜಿಲ್ಲೆಗಳ, ಉಡುಪಿಯಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ, ಮೈಸೂರಿನಲ್ಲಿ ಹಳೇ ಮೈಸೂರು ಜಿಲ್ಲೆಗಳ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ದತ್ತಾ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts