More

    ಜೆಜೆಎಂ ಯೋಜನೆಯಡಿ 881 ಹಳ್ಳಿಗಳಿಗೆ ಶುದ್ಧ ನೀರು

    ಬೀದರ್: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯ 881 ಗ್ರಾಮ (ತಾಂಡಾಗಳು ಸೇರಿ)ಗಳಲ್ಲಿ ಸುಮಾರು 768.32 ಕೋಟಿ ರೂ. ಅನುದಾನದಲ್ಲಿ 2,72,587 ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

    ತಾಲೂಕಿನ ಅಮದಾಲಪಾಡ್ ಹಾಗೂ ಕಪಲಾಪುರ (ಜೆ) ಗ್ರಾಮದಲ್ಲಿ ಭಾನುವಾರ ಜಲ ಜೀವನ ಮೀಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ, ಈ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ನೀರಿನ ಸಂಪರ್ಕ ಒದಗಿಸಲಾಗುತ್ತದೆ. ಈಗಾಗಲೇ ಮೊದಲ ಹಂತದ ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದು ತಿಳಿಸಿದರು.

    ಮೊದಲ ಹಂತದಲ್ಲಿ ಒಟ್ಟು 135 ಹಳ್ಳಿಗಳಲ್ಲಿ 80.69 ಕೋಟಿ ರೂ. ಅಡಿ 51,134 ಕುಟುಂಬಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಔರಾದ್ ತಾಲೂಕಿನಲ್ಲಿ 35, ಬಸವಕಲ್ಯಾಣ 30, ಭಾಲ್ಕಿ 22, ಬೀದರ್ 25 ಮತ್ತು ಹುಮನಾಬಾದ್ ತಾಲೂಕಿನಲ್ಲಿ 23 ಹಳ್ಳಿಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಶೇ.30 ಕಾಮಗಾರಿ ಪೂರ್ಣಗೊಂಡಿದೆ ಎಂದರು.

    ಎರಡನೇ ಹಂತದಲ್ಲಿ 212 ಹಳ್ಳಿಗಳಲ್ಲಿ 210 ಕೋಟಿ ರೂ. ಅನುದಾನದಲ್ಲಿ ಔರಾದ್ ತಾಲೂಕಿನಲ್ಲಿ 28 ಹಳ್ಳಿ, ಬಸವಕಲ್ಯಾಣ 60, ಭಾಲ್ಕಿ 37, ಬೀದರ್ 72 ಮತ್ತು ಹುಮನಾಬಾದ್ 15 ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು, ಕೆಲವೊಂದು ಟೆಂಡರ್ ಹಂತದಲ್ಲಿವೆ. ಈ ಹಂತದಲ್ಲಿ ಒಟ್ಟು 1,00,724 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

    ಮೂರನೇ ಹಂತದಲ್ಲಿ 308 ಹಳ್ಳಿಗಳಿಗೆ 207.58 ಕೋಟಿ ರೂ. ಅನುದಾನದಲ್ಲಿ ಔರಾದ್ನಲ್ಲಿ 135, ಬಸವಕಲ್ಯಾಣ 96, ಭಾಲ್ಕಿ 23, ಬೀದರ್ 40 ಮತ್ತು ಹುಮನಾಬಾದ್ ತಾಲೂಕಿನಲ್ಲಿ 14 ಕಾಮಗಾರಿ ನಡೆಯಲಿದ್ದು, 74,856 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದರು.

    ನಾಲ್ಕನೇ ಹಂತದಲ್ಲಿ 226 ಹಳ್ಳಿಗಳಿಗೆ 269.98 ಕೋಟಿ ರೂ. ಅನುದಾನದಲ್ಲಿ ಔರಾದ್ ತಾಲೂಕಿನಲ್ಲಿ 93, ಭಾಲ್ಕಿ 78, ಹುಮನಾಬಾದ್ 55 ಹಳ್ಳಿಗಳಲ್ಲಿ ಕಾಮಗಾರಿ ನಡೆಯಲಿವೆ. 2024ರೊಳಗೆ ದೇಶದಲ್ಲಿರುವ ಎಲ್ಲ ಗ್ರಾಮೀಣ ಬಡ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಜೆಜೆಎಂ ಯೋಜನೆಯಡಿ ದೇಶದ ಗ್ರಾಮೀಣ ಪ್ರದೇಶದಲ್ಲಿರುವ 19,31,99,823 ಕುಟುಂಬಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಜಿಪಂ ಸಿಇಒ ಜಹೀರಾ ನಸೀಮ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ರಾಜೇಂದ್ರ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts