More

    ಜೀವವೈವಿಧ್ಯ ಮಂಡಳಿಯಿಂದ ಹೊಗರೇಖಾನ್ ಗಿರಿ ರಕ್ಷಿಸಿದ ಹೆಮ್ಮೆ

    ಕಡೂರು: ಗಣಿಗಾರಿಕೆಯಿಂದ ತನ್ನ ಪ್ರದೇಶದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ತಾಲೂಕಿನ ಹೊಗರೇಖಾನ್ ಗಿರಿಯನ್ನು ರಕ್ಷಿಸಿರುವುದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಹೆಗ್ಗಳಿಕೆ ಎಂದು ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

    ತಾಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಜೀವವೈವಿಧ್ಯ ಸಮಿತಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆಯೇ ಹೊಗರೆಖಾನ್ ಗಿರಿಯನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೊಷಿಸಲಾಗಿದ್ದು, ಆ ಬೆಟ್ಟ ಕಲ್ಲು ಗಣಿಗಾರಿಕೆಗೆ ಬಲಿಯಾಗುವುದನ್ನು ತಡೆಯಲಾಗಿದೆ. ರಾಜ್ಯದಲ್ಲಿರುವ ನಾಲ್ಕು ಪಾರಂಪರಿಕ ಜೀವವೈವಿಧ್ಯ ತಾಣಗಳಲ್ಲಿ ಇದೂ ಒಂದಾಗಿದ್ದು, ಅಭಿವೃದ್ಧಿಗಾಗಿ ಮಂಡಳಿ ಹಲವು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

    ಹೊಗರೇಖಾನ್ ಗಿರಿ ಪ್ರದೇಶದ ರೈತರು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಿರಿಯ 2,500 ಎಕರೆ ಪ್ರದೇಶದ ಜೀವವೈವಿಧ್ಯತೆಯನ್ನು ಸುಸ್ಥಿರಗೊಳಿಸಿ ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಈ ಗಿರಿಯ ಮಹತ್ವದ ಬಗ್ಗೆ ಕನ್ನಡದಲ್ಲಿ ಕರಪತ್ರ ಮುದ್ರಿಸಿ ಜನರಲ್ಲಿ ಅರಿವು ಮೂಡಿಸಿ ಎಂದು ತಾಪಂ ಇಒ ಡಾ. ದೇವರಾಜ ನಾಯ್ಕಗೆ ಸೂಚಿಸಿದರು.

    ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ ಅವುಗಳ ಸುಸ್ಥಿರ ಬಳಕೆ ಮಾಡಿಕೊಂಡು ಆ ಪ್ರದೇಶದವನ್ನು ಅಭಿವೃದ್ಧಿಪಡಿಸುವುದರಿಂದ ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಬಹುದು ಎಂದು ಹೇಳಿದರು.

    ಬಾಸೂರು ಕಾವಲಿನಲ್ಲಿ ವನ್ಯಜೀವಿ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಲಯ ಅರಣ್ಯಾಧಿಕಾರಿ ತನುಜ್​ಕುಮಾರ್ ವಿವರಣೆ ನೀಡಿದರು.

    ಹಸಿರು ಬಜೆಟ್ ಮಂಡಿಸಿ : ತಾಪಂ ಅಧ್ಯಕ್ಷರೇ ತಾಲೂಕು ಸಮಿತಿ ಅಧ್ಯಕ್ಷರಾಗಿರುವುದರಿಂದ ಬಜೆಟ್ ಮಂಡಿಸುವಾಗ ಹಸಿರು ಬಜೆಟ್ ಮಂಡಿಸಿ ಜೀವವೈವಿಧ್ಯ ರಕ್ಷಿಸಲು ಮುಂದಾಗಬೇಕು. ಜತೆಗೆ ಸ್ಥಳೀಯ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ ಕೆರೆ, ನದಿ ಮುಂತಾದವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಅನಂತ ಹೆಗಡೆ ಅಶೀಸರ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts