More

    ಜೀವನದ ಪರಿಪೂರ್ಣತೆಗೆ ಕ್ರೀಡೆ ಅಗತ್ಯ

    ಶಹಾಪುರ: ವಿದ್ಯಾರ್ಥಿ ಜೀವನದ ಪರಿಪೂರ್ಣತೆಗೆ ಕ್ರೀಡೆ ಅಗತ್ಯ. ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಗೈಯಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸಲಹೆ ನೀಡಿದರು.

    ಸೋಮವಾರ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಕೆಆರ್ಡಿಬಿಯಿಂದ 2.60 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆಗೊಳಿಸಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಕ್ರೀಡಾಂಗಣ ಸಹಕಾರಿಯಾಗಲಿದೆ ಎಂದರು.ನಮ್ಮಲ್ಲಿ ಆಟದ ಮೈದಾನದಿಂದ ಹಿಡಿದು ಎಲ್ಲದರಲ್ಲೂ ಸೌಲಭ್ಯಗಳ ಕೊರತೆ ಇದ್ದು, ಇರುವ ಸೌಲಭ್ಯ ಬಳಸಿಕೊಳ್ಳುವವರ ಸಂಖ್ಯೆಯೂ ತೀರಾ ಕಡಿಮೆ. ಅರ್ಹತೆ ಇರುವವರಿಗೆ ಸಿಗುವ ಅವಕಾಶಗಳೂ ಕಡಿಮೆ. ಪ್ರತಿಭಾವಂತ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ಅವರೆಲ್ಲ ತರಬೇತಿಯಿಂದ ವಂಚಿತರಾಗಿದ್ದಾರೆ. ಆದರೆ ತಾಲೂಕಿನಲ್ಲಿ ಇಂತಹ ಕೊರತೆ ನೀಗಿಸಲು ಸುಸಜ್ಜಿತ, ಸೌಕರ್ಯ ಒಳಗೊಂಡ ಕ್ರೀಡಾಂಗಣ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಲು ಸಕಲ ವ್ಯವಸ್ಥೆ ಹಾಗೂ ಪ್ರೋತ್ಸಾಹ ನೀಡಲು ನಾನು ಸದಾ ಸಿದ್ಧವಿರುವುದಾಗಿ ಎಂದು ಹೇಳಿದರು.

    ಪ್ರಥಮ ದರ್ಜೆ ಕಾಲೇಜಿಗೆ 80 ಎಕರೆ ವಿಶಾಲವಾದ ಜಮೀನು ಇದ್ದು, ಇದನ್ನು ಶಿಕ್ಷಣ, ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಇದೇ ಜಮೀನಿನಲ್ಲಿ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮಾಡ್ರನ್ ಪದವಿ ಕಾಲೇಜು ಮಂಜೂರಾಗಿದ್ದು, 14 ಕೋಟಿ ರೂ. ವೆಚ್ಚದ ಈ ಕಟ್ಟಡ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ. ಅಲ್ಲದೆ 4ಕೋಟಿ ವೆಚ್ಚದಲ್ಲಿ ಕೋಣೆ ಹಾಗೂ ಸ್ನಾತಕೋತ್ತರ ಕೇಂದ್ರ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.

    ಪ್ರಾಚಾರ್ಯ ಪ್ರೊ.ಚೆನ್ನರೆಡ್ಡಿ ಪಾಟೀಲ್ ತಂಗಡಿಗಿ, ಲೋಕೋಪಯೋಗಿ ಇಲಾಖೆ ಎಇಇ ಸಿದ್ದಲಿಂಗಪ್ಪರೆಡ್ಡಿ, ಮೋನೋದ್ದೀನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲ್ಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಚಂದ್ರಶೇಖರ ಲಿಂಗದಳ್ಳಿ, ಶರಣಪ್ಪ ಸಲದಪುರ, ಸಣ್ಣ ನಿಂಗಪ್ಪ ನಾಯ್ಕೋಡಿ, ಮೌನೇಶ್ ನಾಟೇಕರ, ಶಾಂತಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts