More

    ಜಿಲ್ಲೆಯ ಹಲವೆಡೆ ರಥಸಪ್ತಮಿ ಆಚರಣೆ

    ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯ ಹಲವೆಡೆ ರಥಸಪ್ತಮಿ ಅಂಗವಾಗಿ ಶುಕ್ರವಾರ ಯೋಗ ಸಾಧಕರು, ಶಿಕ್ಷಕರು ಒಳಗೊಂಡು ಸಾವಿರಾರು ಮಂದಿ 108 ಸೂರ್ಯ ನಮಸ್ಕಾರ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

    ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ಆಯುಷ್ ಇಲಾಖೆಯಿಂದ ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ದೇಗುಲ ಆವರಣದಲ್ಲಿ, ಪತಂಜಲಿ ಯೋಗ ಸಮಿತಿ, ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದಿಂದ ವೀರ ಸಾವರ್ಕರ್ ಉದ್ಯಾನದಲ್ಲಿ, ಚಿನ್ಮಯಿ ಮಯೂರು ಯೋಗ ಸಂಸ್ಥೆ ಹಾಗೂ ಇನ್ನಿತರೆ ಯೋಗ ಶಿಕ್ಷಣ ಸಂಸ್ಥೆಗಳಿಂದಲೂ ವಿವಿಧ ಸ್ಥಳಗಳಲ್ಲಿ ಆಚರಿಸಲಾಯಿತು.

    ಮುಂಜಾನೆ ಸೂರ್ಯದೇವನ ಪ್ರಾರ್ಥನೆಯೊಂದಿಗೆ ವಿಶೇಷ ಪೂಜೆ, ಅಗ್ನಿಹೋತ್ರ ಹೋಮ, ಆರ್ಘ್ಯವನ್ನು ಸಮರ್ಪಿಸಿ, ಸೂರ್ಯಾರಾಧನೆಯೊಂದಿಗೆ ನಮಸ್ಕಾರ ಜರುಗಿತು.

    ಸೂರ್ಯನ ಶಕ್ತಿ ಅಗಾಧವಾದುದು: ಅನಾದಿ ಕಾಲದಿಂದಲೂ ಸೂರ್ಯನನ್ನು ಪೂಜಿಸುವ ವಾಡಿಕೆ ಭಾರತದಲ್ಲಿದೆ. ನಮ್ಮ ವೇದ, ಉಪನಿಷತ್ತುಗಳಲ್ಲೂ ಸೂರ್ಯನ ಶಕ್ತಿಯ ಉಲ್ಲೇಖವಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ಸಂ. ನಾಗಸಂದ್ರ ಹೇಳಿದರು. ನಿತ್ಯ ಸೂರ್ಯೋದಯದ ಕಾರಣಕ್ಕೆ ವಿಷಕಾರಿ ಕ್ರಿಮಿಗಳು ಸಾವನ್ನಪ್ಪುತ್ತವೆ. ಕಿರಣಗಳು ಚಿಕಿತ್ಸೆಗೆ ಪೂರಕವಾಗಿವೆ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ. ಹೀಗಾಗಿ ಆಯುಷ್ ಚಿಕಿತ್ಸಾ ಪದ್ಧತಿಯ ಒಂದು ಭಾಗವೂ ಆಗಿದೆ ಎಂದು ತಿಳಿಸಿದರು.

    ವಿಶೇಷಾಲಂಕಾರ: ಸೂರ್ಯನ ಆರಾಧನೆಯ ರಥಸಪ್ತಮಿ ಉತ್ತಮ ದಿನವೆಂದು ಹಿಂದುಗಳು ನಂಬಿದ್ದಾರೆ. ಹೀಗಾಗಿ ಮನೆಗಳ ಮುಂಭಾಗವೂ ಸೂರ್ಯನಿಗೆ ಹಲವರು ನಮಿಸಿ ಭಕ್ತಿ ಸಮರ್ಪಿಸಿದರು. ಇನ್ನೂ ಬರಗೇರಮ್ಮ, ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆ ಮಾರಮ್ಮ, ಗೌರಸಂದ್ರ ಮಾರಮ್ಮ, ವೆಂಕಟೇಶ್ವರ ಸ್ವಾಮಿ ಸೇರಿ ನಗರದ ವಿವಿಧ ದೇಗುಲಗಳಲ್ಲಿ ವಿಶೇಷಾಲಂಕಾರ ಸೇವೆ, ಪೂಜೆಗಳು ಜರುಗಿದವು.

    ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಶಿವಕುಮಾರ್, ಪತಂಜಲಿ ಸಮಿತಿಯ ಯೋಗ ಗುರು ಶ್ರೀನಿವಾಸ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಆರ್.ಪ್ರತಾಪ್‌ರೆಡ್ಡಿ, ಪದಾಧಿಕಾರಿಗಳಾದ ಗಾಯತ್ರಿ ಶಿವರಾಂ, ಎಂ.ಸಿ.ಶಂಕರ್, ಮಂಜುನಾಥ್, ಮುಕುಂದರೆಡ್ಡಿ, ಮೆದೇಹಳ್ಳಿ ಗ್ರಾಪಂ ಸದಸ್ಯ ರಮೇಶ್, ಮೋತ್ಕೂರ್, ಸುಲೋಚನಾ ಶಂಕರ್, ಆರ್.ನಿರಂಜನ, ವನಜಾಕ್ಷಿ, ರೀನಾ ವೀರಭದ್ರಪ್ಪ, ಗುರುಮೂರ್ತಿ, ವೀಣಾ, ವಿಜಯ, ಅರುಣ್, ಲೀಲಾ ಇತರರಿದ್ದರು.

    ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ ಡಾ. ಗಂಗಾಧರ ವರ್ಮ, ಜೆ.ಎನ್.ಕೋಟೆ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ, ಪ್ರೇಮಾ, ಯೋಗ ಶಿಕ್ಷಕ ರವಿ ಅಂಬೇಕರ್, ಯೋಗ ಸಾಧಕರು-ಶಿಕ್ಷಕರಾದ ವನಜಾಕ್ಷಮ್ಮ, ಎಂ.ಆರ್.ಮಂಜುನಾಥ್, ಎಲ್.ಎಸ್.ಬಸವರಾಜ್, ವಸಂತಲಕ್ಷ್ಮಿ, ಕವಿತಾ ನಾಗರಾಜ್, ಜಯಣ್ಣ ಸೀಬಾರ, ಮಲ್ಲಿಕಾರ್ಜುನ ಚಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts