More

    ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ

    ಮಡಿಕೇರಿ: ಕೊಡಗಿನ ವಿವಿಧೆಡೆ ಹೊಸದಾಗಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದೆಂದು ಇಂಧನ ಇಲಾಖೆ ಅಪರ ಕಾರ್ಯದರ್ಶಿ ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಣಾಧಿಕಾರಿ ತೀತಿರ ರೋಷನ್ ಅಪ್ಪಚ್ಚು ಹೇಳಿದರು.

    ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ 24ನೇ ವಾರ್ಷಿಕೋತ್ಸವ ಹಾಗೂ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯುತ್ ಸರಬರಾಜು ವಿಚಾರದಲ್ಲಿ ಕೊಡಗು ತುಂಬಾ ಹಿಂದೆ ಇದೆ. 5 ತಾಲೂಕುಗಳಿರುವ ಜಿಲ್ಲೆಯಲ್ಲಿ ಅಷ್ಟು ವಿದ್ಯುತ್ ಲೋಡ್ ಇಲ್ಲ. ಹೀಗಿದ್ದರೂ, ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೇ ವಿದ್ಯುತ್ ಮಾರ್ಗ ಇರುವಲ್ಲಿ ಇಂತಹ ಸಮಸ್ಯೆ ಇದೆ. ಜಿಲ್ಲೆಯ ವಿವಿಧೆಡೆ ಉಪಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.

    ಹುದಿಕೇರಿ, ಶ್ರೀಮಂಗಲ, ಬಾಳೆಲೆ, ಸಿದ್ದಾಪುರ, ಕಳತ್ಮಾಡು, ಭಾಗಮಂಡಲ, ಸಂಪಾಜೆ, ಮೂರ್ನಾಡು, ಹಾನಗಲ್, ಕೊಡ್ಲಿಪೇಟೆ, ಮಾದಾಪುರ, ಕೂಡಿಗೆ ಮತ್ತಿತರ ಭಾಗಗಳಲ್ಲಿ ಉಪಕೇಂದ್ರ ಸ್ಥಾಪನೆಯಾಗಲಿದೆ. ಈ ಕೆಲಸ ಪೂರ್ಣಗೊಂಡ ಮೇಲೆ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು. ದೇಶ ವಿದ್ಯುಚ್ಛಕ್ತಿ ಸ್ವಾವಲಂಬನೆಯಲ್ಲಿದೆ. ಪ್ರತಿ ಹಳ್ಳಿಗೂ ವಿದ್ಯುತ್ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. 2030ರ ವೇಳೆಗೆ ಎಲೆಕ್ಟ್ರಿಕ್ ವಾಹನ ಹೆಚ್ಚಾಗಲಿದೆ. ಇದರಿಂದ ಪೆಟ್ರೋಲ್, ಡಿಸೇಲ್ ವಾಹನಗಳ ಸಂಖ್ಯೆ ಕಡಿಮೆಯಾಗಿ ಇಂಧನ ಆಮದು ತಗ್ಗಲಿದೆ. ದೇಶದ ಆರ್ಥಿಕ ಚೇತರಿಕೆಗೂ ಇದು ಸಹಕಾರಿಯಾಗಲಿದೆ ಎಂದರು.
    ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ ಪೂವಯ್ಯ ಮಾತನಾಡಿ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವವನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದೆ. ಬೆಳ್ಳಿ ಮಹೋತ್ಸವ ಅರ್ಥಪೂರ್ಣ, ಅನುಕರಣೀಯ, ಸ್ಮರಣೀಯವಾಗಿರಬೇಕೆಂದರು.

    ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಪತ್ರಕರ್ತರು ರಜಾ ದಿನಗಳಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸಚಿವರು, ಸಂಸದರ ಕಾರ್ಯಕ್ರಮಗಳಿದ್ದಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕಾಗುತ್ತದೆ. ಎಲ್ಲಾ ರಂಗದಲ್ಲೂ ಒತ್ತಡ ಇದ್ದು, ತಾಳ್ಮೆಯಿಂದ ಮುನ್ನಡೆದರೆ ಯಶಸ್ಸು ಸಾಧ್ಯವೆಂದರು.
    ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪದಾಧಿಕಾರಿಗಳಾದ ಕೆ.ಕೆ. ರೆಜಿತ್‌ಕುಮಾರ್ ಗುಹ್ಯ, ಸಮೃದ್ಧಿ ವಾಸು, ನವೀನ್ ಡಿಸೋಜ, ಸುನಿಲ್ ಪೊನ್ನೇಟಿ, ಎಂ.ಎನ್. ಚಂದ್ರಮೋಹನ್, ಬೊಳ್ಳಜೀರ ಬಿ. ಅಯ್ಯಪ್ಪ ಇದ್ದರು. ಸಾಧಕ ಪತ್ರಕರ್ತರು ಹಾಗೂ ಶೇ.85 ಕ್ಕಿಂತ ಹೆಚ್ಚಿನ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು.

    ಸ್ಪರ್ಧಾ ವಿಜೇತರು: ಮಕ್ಕಳ ಬಿಸ್ಕೆಟ್ ತಿನ್ನುವ ಸ್ಪರ್ಧೆ: ಶಶಾಂಕ್ ಪ್ರಥಮ, ಪ್ರೀಶ್ಮ ದ್ವಿತೀಯ, ಜೀಶ್ಮ ತೃತೀಯ. ಬಲೂನ್ ಮತ್ತು ಲೋಟ ಸ್ಪರ್ಧೆಯಲ್ಲಿ ನಿಶಾಂಕ್ (ಪ್ರ), ಶಶಾಂಕ್ (ದ್ವಿ), ಲಕ್ಷಿತಾ (ತೃ). ಕ್ಲಬ್ ಸದಸ್ಯರಿಗೆ ನಡೆದ ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ರಿಜ್ವಾನ್ (ಪ್ರ), ಚೈತನ್ಯ ಚಂದ್ರಮೋಹನ್ (ದ್ವಿ), ಕೃಷ್ಣ (ತೃ). ಸದಸ್ಯರ ಕುಟುಂಬದ ಮಹಿಳೆಯರಿಗಾಗಿ ನಡೆದ ಸ್ಟ್ರಾಬಾಲ್ ಸ್ಪರ್ಧೆ: ಅರ್ಚನಾ (ಪ್ರ), ದೀಪಾ ಅನು ಕಾರ್ಯಪ್ಪ (ದ್ವಿ), ಅನುರಾಧ (ತೃ), ಒಗಟು ಬಿಡಿಸುವ ಸ್ಪರ್ಧೆಯಲ್ಲಿ ಜಯಲಕ್ಷ್ಮೀ ನಂಜುಂಡಸ್ವಾಮಿ, ಪ್ರದೀಪ್‌ಕುಮಾರ್, ವಿನು ಕುಶಾಲಪ್ಪ, ಸದಸ್ಯರಿಗೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವಿಶ್ವಕುಂಬೂರು (ಪ್ರ), ತೇಜಸ್ ಪಾಪಯ್ಯ (ದ್ವಿ) ಬಹುಮಾನ ಪಡೆದರು.
    ಸದಸ್ಯರ ಮಕ್ಕಳಿಗೆ ನಡೆದ ಛದ್ಮವೇಷ ಸ್ಪರ್ಧೆ: ಪೊನ್ನೇಟಿ ತಿಷ್ಯಾ (ಪ್ರ), ಪೋಕ್ಷಾ ತೇಜಸ್ (ದ್ವಿ), ದೀಕ್ಷಾ (ತೃ), ಮಕ್ಕಳ ಗಾಯನ ಸ್ಪರ್ಧೆ: ಅಪೂರ್ವ (ಪ್ರ), ಪೊನ್ನೇಟಿ ತಿಷ್ಯಾ (ದ್ವಿ), ಲಕ್ಷಿತಾ (ತೃ), ಸದಸ್ಯರ ಗಾಯನ ಸ್ಪರ್ಧೆಯಲ್ಲಿ ನಂಜುಂಡಸ್ವಾಮಿ (ಪ್ರ), ಚೆನ್ನನಾಯಕ್ (ದ್ವಿ), ಪ್ರಜ್ಞಾ ರಾಜೇಂದ್ರ (ತೃ), ಮಕ್ಕಳ ನೃತ್ಯ ಸ್ಪರ್ಧೆಯಲ್ಲಿ ಪುತ್ತಂ ಪ್ರೀಷ್ಮಾ (ಪ್ರ), ಪರಿಧಿ ಪೊನ್ನಮ್ಮ (ದ್ವಿ), ಸಾಗರಿಕ ನಾಗೇಶ್ (ತೃ) ಬಹುಮಾನ ಪಡೆದರು. ತೀರ್ಪುಗಾರರಾಗಿ ರೇವತಿ ರಮೇಶ್, ಪ್ರತಿಮಾ ಹರೀಶ್ ರೈ ಕಾರ್ಯ ನಿರ್ವಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts