More

    ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನಿರಂತರ ನೀರು

    ಹುಬ್ಬಳ್ಳಿ: 1041.80 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ನೀಲನಕ್ಷೆ ತಯಾರಾಗಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಜರುಗಿಸಿ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

    ಮಂಗಳವಾರ ಹುಬ್ಬಳ್ಳಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್​ಟಿಯುಪಿ ಕನ್ಸಲ್ಟಂಟ್​ನವರು ಯೋಜನೆಯ ಪ್ರಾಥಮಿಕ ಸಿದ್ಧತಾ ವರದಿಯನ್ನು ವಿಸõತವಾಗಿ ಜನಪ್ರತಿನಿಧಿಗಳೆದರು ಮಂಡಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೊಶಿಯವರು ವೆಬಿನಾರ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಘಟಗಿ ನಗರ ಸೇರಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದರು.

    900.46 ಕೋ. ಯೋಜನೆ ಅನುಷ್ಠಾನಕ್ಕೆ, 5 ವರ್ಷಗಳ ಕಾಲ ಯೋಜನೆ ನಿರ್ವಹಣೆಗೆ 141.34 ಕೋಟಿ ರೂ. ಮೀಸಲಿರಿಸಲಾಗುವುದು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಒಪ್ಪಿಗೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಯೋಜನೆಯನ್ನು ಮಂಡಿಸಲಾಗುವುದು. ಸಚಿವ ಸಂಪುಟ ಒಪ್ಪಿಗೆ ನಂತರ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

    ಹು-ಧಾ ಅವಳಿನಗರದ ಎಲ್ಲ ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆ ಮಾಡುವ ಯೋಜನೆ ಕುರಿತು ಎಲ್ ಆಂಡ್ ಟಿ ಕಂಪನಿಯವರು ಅಧ್ಯಯನಕ್ಕಾಗಿ 6 ತಿಂಗಳ ಸಮಯಾವಕಾಶ ಕೋರಿದ್ದರು. ಅವರಿಗೆ ಮೂರು ತಿಂಗಳು ನೀಡಲಾಗಿದೆ. ಬರುವ ಮಾರ್ಚ್ ನಂತರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

    ಪರಿಹಾರಕ್ಕೆ ಸೂಚನೆ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುವ ಜಾಗದಲ್ಲಿ ಅಗತ್ಯ ಮುಂಜಾಗೃತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಸೂಚನೆ ನೀಡಿದ್ದೇನೆ. ಇಂದಿರಾ ಗಾಜಿನ ಮನೆ ನವೀಕರಣ ಕಾಮಗಾರಿ ಸ್ಥಳದಲ್ಲಿ ಬಾಲಕಿ ಮೃತ ಪಟ್ಟಿರುವುದು ದುರದೃಷ್ಟಕರ. ಮೃತ ಮಗುವಿನ ಕುಟುಂಬದವರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

    ಸಭೆಯಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಶಾಸಕರಾದ ಪ್ರದೀಪ್ ಶೆಟ್ಟರ್, ಅಮೃತ ದೇಸಾಯಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಸಿಇಒ ಡಾ.ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts