More

    ಜಿಲ್ಲೆಯ ಎರಡು ಕಡೆ ಟೋಲ್ ವಸೂಲಿ ಪ್ರಾರಂಭ

    ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜಿಲ್ಲೆಯ ಎರಡು ಕಡೆಗಳಲ್ಲಿ ಮಂಗಳವಾರ ಟೋಲ್ ಶುಲ್ಕ ವಸೂಲಿ ಪ್ರಾರಂಭವಾಗಿದೆ.

    ಅಂಕೋಲಾದ ಹಟ್ಟಿಕೇರಿ, ಕುಮಟಾದ ಹೊಳೆಗದ್ದೆಯಲ್ಲಿ ಐಆರ್​ಬಿ ಕಂಪನಿ ಹೊರ ಜಿಲ್ಲೆ ಹಾಗೂ ರಾಜ್ಯಗಳ ವಾಹನಗಳಿಗೆ ಟೋಲ್ ಶುಲ್ಕ ವಸೂಲಿ ಪ್ರಾರಂಭಿಸಿದೆ. ಕೆಎ 31, ಕೆಎ 47 ಹಾಗೂ ಕೆಎ 30 ನೋಂದಣಿ ಸಂಖ್ಯೆ ಇರುವ ವಾಹನಗಳನ್ನು ನೇರವಾಗಿ ಬಿಡಲಾಗುತ್ತಿದೆ.

    ಅಂಕೋಲಾ ಹಟ್ಟಿಕೇರಿ ಸಮೀಪದ ಟೋಲ್ ಗೇಟ್​ನಲ್ಲಿ ಮಂಗಳವಾರ ಬೆಳಗ್ಗೆ ಟೋಲ್ ವಸೂಲಿ ಪ್ರಾರಂಭಿಸುತ್ತಿದ್ದಂತೆ ಸ್ಥಳೀಯರು ಸೇರಿದ್ದರು. ಆದರೆ, ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುತ್ತಿರುವ ಮಾಹಿತಿ ಪಡೆದು ವಾಪಸಾದರು ಎಂದು ಅಂಕೋಲಾ ಪೊಲೀಸರು ಮಾಹಿತಿ ನೀಡಿದ್ದಾರೆ.

    ಭಟ್ಕಳದಲ್ಲಿ ಗಡಿ ಗೊಂದಲ: ಭಟ್ಕಳ ಗಡಿಯಲ್ಲಿ ಟೋಲ್ ಸುಂಕ ವಸೂಲಿಗೆ ತಾಂತ್ರಿಕ ತೊಂದರೆ ಉಂಟಾಗಿರುವುದರಿಂದ ಐಆರ್​ಬಿ ಅಧಿಕಾರಿಗಳು ಅದನ್ನು ಪ್ರಾರಂಭಿಸಿಲ್ಲ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಶಿರೂರು ಪಂಚಾಯಿತಿಯಲ್ಲಿ ಟೋಲ್ ಪ್ರಾರಂಭಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫೆ. 7 ರಂದು ನೋಟಿಫಿಕೇಶನ್ ಹೊರಡಿಸಿದೆ. ಆದರೆ, ಟೋಲ್ ಗೇಟ್ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಪಂ ವ್ಯಾಪ್ತಿಗೆ ಬರುತ್ತದೆ ಎಂಬುದು ಸ್ಥಳೀಯರ ಆಕ್ಷೇಪ. ಇಲ್ಲಿ ಸ್ಥಳೀಯ ವಾಹನಗಳಿಗೆ ರಿಯಾಯಿತಿ ನೀಡಿದರೆ ಕುಂದಾಪುರ ನೋಂದಣಿ ಸಂಖ್ಯೆ ವಾಹನಕ್ಕೆ ನೀಡಬೇಕು. ಭಟ್ಕಳ ವಾಹನಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದು ಪ್ರಯಾಣಿಕರ ದೂರು.

    ಕಾಮಗಾರಿ ಮುಗಿಸಿ ಟೋಲ್ ಸಂಗ್ರಹಿಸಿ: ಕುಮಟಾ: ಚತುಷ್ಪಥ ಕಾಮಗಾರಿ ಶೇ. 50ರಷ್ಟೂ ನಡೆಯದೇ ಟೋಲ್ ಸುಂಕ ವಸೂಲಿ ಆರಂಭಿಸಿ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಐಆರ್​ಬಿ ಅನ್ಯಾಯ ಮಾಡಲು ಹೊರಟಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಂಸದರು ಕೈಕಟ್ಟಿ ಕುಳಿತಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ (ನಾರಾಯಣಗೌಡ ಬಣ)ಆರೋಪಿಸಿದರು.

    ಹೊಳೆಗದ್ದೆ ಟೋಲ್ ನಾಕಾ ಬಳಿ ಮಂಗಳವಾರ ಪ್ರತಿಭಟನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಪ್ರದಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಮಾತನಾಡಿ, ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್​ಬಿಯಿಂದ ಕೇವಲ 140 ಕಿ.ಮೀ. ಮಾತ್ರ ಆಗಿದೆ. ಅದರಲ್ಲೂ ಸಾಕಷ್ಟು ಕಡೆಗಳಲ್ಲಿ ಅಪೂರ್ಣವಿದೆ. ಅಪೂರ್ಣ ಕಾಮಗಾರಿಯ ನಡುವೆ ಸುಂಕ ವಸೂಲಿ ಖಂಡನೀಯ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದರು. ಕಬಡ್ಡಿ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಸೂರಜ ನಾಯ್ಕ ಹಾಗೂ ಇತರ ಹಲವರು ಟೋಲ್ ಸುಂಕ ವಸೂಲಿ ವಿರೋಧಿಸಿ ಕರವೇ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸುಂಕ ವಸೂಲಿ ಮಾಡದಂತೆ ಪ್ರತಿಭಟನಾಕಾರರು ಪಟ್ಟು ಹಿಡಿದು ಟೋಲ್ ಎದುರು ಕುಳಿತ ಹಿನ್ನೆಲೆಯಲ್ಲಿ ಪೊಲೀಸರು ಭಾಸ್ಕರ ಪಟಗಾರ ಹಾಗೂ ಇನ್ನಿತರರನ್ನು ವಶಕ್ಕೆ ಪಡೆದರು. ದಿವಗಿ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೌಡ, ಅಳಕೋಡ ಪಂಚಾಯಿತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೆಕರ, ಸಂಪತ್​ಕುಮಾರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts