More

    ಜಿಲ್ಲೆಯವರಿಗೇ ಇರಲಿ ಉಸ್ತುವಾರಿ

    ಮೃತ್ಯುಂಜಯ ಕಲ್ಮಠ ಗದಗ
    ಗದಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುರಿತು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಜಿಲ್ಲೆಯ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎನ್ನುವ ಒತ್ತಾಯ ಜೋರಾಗಿದೆ. ಈ ಮಧ್ಯೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಒಂದು ವಾರ ಕಳೆದರೂ ಜಿಲ್ಲೆಗೆ ಭೇಟಿ ನೀಡದಿರುವುದರಿಂದ ಅನೇಕ ಉಹಾಪೋಹಗಳು ಶುರುವಾಗಿವೆ.
    ಸಚಿವ ಬಿ.ಸಿ. ಪಾಟೀಲ ಅವರನ್ನು ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಸರ್ಕಾರ ಜ. 24ರಂದು ಆದೇಶ ಹೊರಡಿಸಿದೆ. ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಎರಡು ಜಿಲ್ಲೆಗಳ ಉಸ್ತುವಾರಿ ಸಿಕ್ಕಿದ್ದರಿಂದ ಚಿತ್ರದುರ್ಗದ ಜಿಲ್ಲಾಡಳಿತ ಆಯೋಜಿಸಿದ್ದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರದ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿಬಹುದಿತ್ತು. ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಸಚಿವರು ಬರಲಿಲ್ಲ.
    ಆಯಾ ಜಿಲ್ಲೆಯ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವುದು ಇಲ್ಲಿವರೆಗೆ ನಡೆದುಕೊಂಡು ಬಂದ ಪದ್ಧತಿ. ಆದರೆ, ಬಿಜೆಪಿ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಕೈಹಾಕಿದ್ದು, ಜಿಲ್ಲೆಯವರನ್ನು ಹೊರತುಪಡಿಸಿ ಬೇರೆ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವ ಸಂಪ್ರದಾಯ ಆರಂಭಿಸಿದೆ. ಹೀಗಾಗಿ, ಜಿಲ್ಲೆಯ ನರಗುಂದ ಶಾಸಕ ಲೋಕೋಪಯೋಗಿ ಇಲಾಖೆ ಮಂತ್ರಿ ಸಿ.ಸಿ. ಪಾಟೀಲ ಅವರನ್ನು ಪಕ್ಕದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರದ ಈ ನಿರ್ಣಯವು ಸ್ಥಳೀಯ ಬಿಜೆಪಿಯ ಕೆಲ ಮುಖಂಡರು, ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದ್ದು, ಹಲವರು ಸಾಮಾಜಿಕ ಜಾಲತಾಣದಲ್ಲಿ ಸಿ.ಸಿ. ಪಾಟೀಲ ಅವರನ್ನು ಮರಳಿ ಗದಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಈ ಕುರಿತು ಸಚಿವ ಸಿ.ಸಿ. ಪಾಟೀಲ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
    ಶ್ರೀರಾಮುಲುಗೆ ಜವಾಬ್ದಾರಿ ಕೊಡಿ!: ಬಿಜೆಪಿಯ ಒಂದು ಬಣ ಸಿ.ಸಿ. ಪಾಟೀಲ ಅವರಿಗೆ ಉಸ್ತುವಾರಿ ಕೊಡಬೇಕು ಎಂದು ಒತ್ತಾಯಿಸುತ್ತಿದೆ. ಮತ್ತೊಂದೆಡೆ ಶ್ರೀರಾಮುಲು ಅವರು ಜಿಲ್ಲೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂಬ ಚರ್ಚೆ ಅವರ ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದೆ. ಸಚಿವ ಬಿ.ಸಿ. ಪಾಟೀಲ ಅವರಿಗೆ ಗದಗ ಜಿಲ್ಲೆ ಹೊಸದು. ಆದರೆ, ಶ್ರೀರಾಮುಲು ಅವರಿಗೆ ಗದಗ ಜಿಲ್ಲೆ ಅತ್ಯಂತ ಚಿರಪರಿಚಿತ. ಏಕೆಂದರೆ ಈಗಾಗಲೇ ಶ್ರೀರಾಮುಲು ಅವರು ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ನಗರದ ಭೀಷ್ಮ ಕೆರೆಯಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಅಡಿಪಾಯ ಹಾಕಿರುವುದು ಸೇರಿ ಹಲವಾರು ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಇದಲ್ಲದೆ, ಶ್ರೀರಾಮುಲು ಅವರು ಆಯೋಜಿಸುತ್ತಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮಗಳಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಿದೆ. ಗದಗ ಜಿಲ್ಲೆ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ನೂರಾರು ಜನರು ಸಾಮೂಹಿಕ ಮದುವೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಶ್ರೀರಾಮುಲು ಅತ್ಯಂತ ಜನಪ್ರಿಯ ಮುಖಂಡರು ಎನಿಸಿಕೊಂಡಿದ್ದರಿಂದ ಬಳ್ಳಾರಿ ಜತೆಗೆ ಗದಗ ಜಿಲ್ಲಾ ಉಸ್ತುವಾರಿ ನೀಡಬೇಕೆಂಬ ಕೂಗು ಕೂಡಾ ಕೇಳಿಬರಲಾರಂಭಿಸಿದೆ.
    ಚುನಾವಣೆಗೆ ಪೂರಕ
    ಮುಂಬರುವ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಒಂದು ವರ್ಷ ಕಳೆದರೆ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಲಿದೆ. ಇಂತಹ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಶ್ರೀರಾಮುಲು ಅವರನ್ನು ನೇಮಿಸುವುದು ಪಕ್ಷಕ್ಕೆ ಪೂರಕವಾಗಲಿದೆ. ಲಿಂಗಾಯತರು ಸೇರಿ ಮೇಲ್ವರ್ಗದ ಮತಗಳು ಬಿಜೆಪಿಗೆ ಲಭಿಸಲಿವೆ. ಆದರೆ, ಅಹಿಂದ ಮತಗಳನ್ನು ಸೆಳೆಯಬೇಕೆಂದರೆ ಶ್ರೀರಾಮುಲು ಅವರ ನೆರವು ಪಡೆಯಬೇಕಿದೆ. ಶ್ರೀರಾಮುಲು ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಶೇ. 30ರಿಂದ 40ರಷ್ಟು ಅಹಿಂದ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬ ಅಂದಾಜಿದೆ. ಆದ್ದರಿಂದ ಶ್ರೀರಾಮುಲು ಅವರಿಗೆ ಗದಗ ಜಿಲ್ಲೆಯ ಜವಾಬ್ದಾರಿ ನೀಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಚುನಾವಣೆಯ ವರ್ಷ ಇದಾಗಿದ್ದರಿಂದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತಹ ಸಚಿವರಿಗೆ ಗದಗ ಜಿಲ್ಲೆಯ ಉಸ್ತುವಾರಿ ನೀಡಬೇಕು. ಬಹಿರಂಗವಾಗಿ ಹೇಳಿಕೊಂಡರೆ ಟಾರ್ಗೆಟ್ ಆಗುವ ಭಯವೂ ಇದೆ. ಆದ್ದರಿಂದ, ಯಾರೇ ಆದರೂ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು. ಜಿಲ್ಲೆಯ ಬಗ್ಗೆ ಕಾಳಜಿ ಇರಬೇಕು, ಕೆಲಸ ಮಾಡುವಂತವರಿಗೆ ಅಧಿಕಾರ ಕೊಡಬೇಕು ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಕಾರ್ಯಕರ್ತರು ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts