More

    ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಸೋಂಕು

    ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 114ಕ್ಕೇರಿದೆ. ಮುಂಬೈಗೆ ಹೋಗಿ ಬಂದಿರುವ ಭದ್ರಾವತಿಯ ಮಹಿಳೆ ಮತ್ತು ಹೊಸನಗರ ತಾಲೂಕಿನ ಕಬ್ಬಿನ ವ್ಯಾಪಾರಿ ಸಂಪರ್ಕದಲ್ಲಿದ್ದ ಪಾಶೆಟ್ಟಿಕೊಪ್ಪ ಗ್ರಾಮದ ಯುವಕನಿಗೆ ಸೋಂಕು ತಗುಲಿದೆ.

    ಭದ್ರಾವತಿ ಕಾಗದ ನಗರದ 6 ನೇ ವಾರ್ಡಿನ 3 ನೇ ತಿರುವು ಮಾತ್ರ ಸೀಲ್​ಡೌನ್ ಮಾಡಲಾಗಿದೆ. ಉಳಿದಂತೆ ಅದಕ್ಕೆ ಹೊಂದಿಕೊಂಡಂತಿರುವ 2 ಮತ್ತು 4 ನೇ ತಿರುವಿನಲ್ಲಿ ಕೂಡ ಬ್ಯಾರಿಕೇಡ್ ಇಟ್ಟು ಯಾರೂ ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ. 82 ಕುಟುಂಬಗಳಿರುವ ಪಾಶೆಟ್ಟಿಕೊಪ್ಪ ಮತ್ತು ಜೀರಿಗೆಮನೆ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

    ಕಾಗದ ನಗರದ ಮಹಿಳೆ ಮುಂಬೈನಲ್ಲಿರುವ ತನ್ನ ಸಹೋದರಿಯ ಬಾಣಂತನ ಮಾಡಲು 10 ವರ್ಷದ ಮಗನೊಂದಿಗೆ ತೆರಳಿದ್ದು, ಜೂ. 18ರಂದು ವಾಪಸ್ ಬಂದಿದ್ದರು. ಮುಂಬೈನಿಂದ ಬಂದ ಕಾರಣ ಸ್ವಪ್ರೇರಣೆಯಿಂದ 19ರಂದು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಗಂಟಲು ದ್ರವ ಸಂಗ್ರಹಿಸಿದ್ದ ವೈದ್ಯರು, ಮುಂಬೈನಿಂದ ಆಗಮಿಸಿದ ಕಾರಣ ಮಹಿಳೆಯನ್ನು ಕ್ವಾರಂಟೈನ್​ನಲ್ಲಿ ಇಟ್ಟಿದ್ದರು. ಸೋಮವಾರ ರಾತ್ರಿ ಪ್ರಯೋಗಾಲಯದ ವರದಿ ಬಂದಿದ್ದು, ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಹತ್ತು ವರ್ಷದ ಮಗನಲ್ಲಿ ಸೋಂಕು ಕಂಡು ಬಂದಿಲ್ಲ.

    ಸೋಂಕಿತ ಮಹಿಳೆಗೆ ಪತಿ, ಓರ್ವಮಗ, ಹಾಗೂ ಓರ್ವ ಮಗಳಿದ್ದಾಳೆ. ತವರು ಮನೆ ಕೂಡ ಭದ್ರಾವತಿಯೇ ಆಗಿದ್ದು, ಮಗಳನ್ನುತವರು ಮನೆಯಲ್ಲಿ ಬಿಟ್ಟಿದ್ದಾರೆ. ಹೀಗಾಗಿ ಅವರು ತಾಯಿಯ ಸಂಪರ್ಕಕ್ಕೆ ಬಂದಿಲ್ಲ. ಪತಿಯನ್ನು ಮಾತ್ರ ಪ್ರಾಥಮಿಕ ಸಂಪರ್ಕ ಎಂದು ಗುರುತಿಸಲಾಗಿದೆ. ಪತಿ ಕೋಳಿ ಅಂಗಡಿ ನಡೆಸುತ್ತಿದ್ದು, ಅವರ ಟ್ರಾವೆಲ್ ಹಿಸ್ಟ್ರಿ ಗಮನಿಸಲಾಗುತ್ತಿದೆ.

    ಬೇಡವೆಂದಿದ್ದ ಆಶಾ ಕಾರ್ಯಕರ್ತೆಯರು: ಬಾಂಬೆಯಲ್ಲಿರುವ ಸಹೋದರಿಯ ಬಾಣಂತನ ಮಾಡಲು ತೆರಳುವ ಬಗ್ಗೆ ಈ ಮಹಿಳೆ ಪರಿಚಿತ ಆಶಾ ಹಾಗೂ ಆರೋಗ್ಯ ಸಿಬ್ಬಂದಿ ಸಲಹೆ ಕೇಳಿದ್ದರು. ಮುಂಬೈನಲ್ಲಿ ಕರೊನಾ ಸೋಂಕು ವ್ಯಾಪಕವಾಗಿದ್ದು, ಹೋಗುವುದು ಸರಿಯಲ್ಲ ಎಂದು ಸಲಹೆ ಮಾಡಿದ್ದರು. ಆದರೆ ಅವರ ಸಲಹೆ ಲೆಕ್ಕಿಸದೆ ಬಾಣಂತನ ಮಾಡಲು ಹೋಗಿದ್ದರು ಎಂದು ಗೊತ್ತಾಗಿದೆ.

    ಮಂಗಳವಾರ ಬೆಳಗ್ಗೆ ವಾರ್ಡಿಗೆ ಭೇಟಿ ಕೊಟ್ಟ ನಗರಸಭೆ , ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ವಾರ್ಡಿನ ಮನೆಗಳಿಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಆಶಾ ಆರೋಗ್ಯ ಕಾರ್ಯಕರ್ತೆಯರಿಂದ ಸ್ಥಳೀಯ ನಿವಾಸಿಗಳ ಆರೋಗ್ಯ ತಪಾಸಣೆ ಕೂಡ ಮಾಡಲಾಗಿದೆ.

    ಪಾಶೆಟ್ಟಿಕೊಪ್ಪದ ಯುವಕನಿಗೆ ಸೋಂಕು: ಹೊಸನಗರ ತಾಲೂಕು ಅಮೃತ ಗ್ರಾಪಂ ವ್ಯಾಪ್ತಿಯ ಪಾಶೆಟ್ಟಿಕೊಪ್ಪ ಗ್ರಾಮದ ಯುವಕ ಈಚೆಗೆ ಸೋಂಕು ಪತ್ತೆಯಾಗಿದ್ದ ಕಬ್ಬಿನ ವ್ಯಾಪಾರಿಯ ಸಂಪರ್ಕದಲ್ಲಿದ್ದ. ಸ್ನೇಹಿತನಿಗೆ ಸೋಂಕು ತಗುಲಿದೆ ಎಂದು ಕರೊನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಭಯಗೊಂಡ ಯುವಕ ಸ್ವಯಂ ಪ್ರೇರಣೆಯಿಂದ ಹೊಸನಗರ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದಾನೆ. ಆಗ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಸೋಂಕಿತ ಯುವಕನ ತಂದೆ, ತಾಯಿ, ಸಹೋದರಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. 82 ಕುಟುಂಬಗಳಿರುವ ಪಾಶೆಟ್ಟಿಕೊಪ್ಪ ಮತ್ತು ಜೀರಿಗೆಮನೆ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಗ್ರಾಮದ ಎಲ್ಲ ಕುಟುಂಬದವರೂ ಪ್ರತಿದಿನ 10 ಜನರಂತೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡುವಂತೆ ಸೂಚಿಸಿದ್ದಾರೆ.

    ತಾಪಂ ಇಒ ಪ್ರವೀಣ್​ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ, ಉಪತಹಸೀಲ್ದಾರ್ ಪ್ರದೀಪ್, ಕಂದಾಯ ನಿರೀಕ್ಷಕ ಇನಾಯಿತ್, ಪಿಡಿಒ ಮುರುಗೇಶ, ಧನ್ಯ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts