More

    ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ

    ಸುಭಾಸ ಧೂಪದಹೊಂಡ ಕಾರವಾರ

    ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಸ್ಥಿತ್ಯಂತರ ಶುರುವಾಗಿದೆ. ಜಿಲ್ಲೆಯ ಎರಡನೇ ಹಂತದ ನಾಯಕರು ಪಕ್ಷಾಂತರ ಪ್ರಾರಂಭಿಸಿದ್ದಾರೆ.

    ಜೆಡಿಎಸ್​ನಲ್ಲಿ ರಾಜೀನಾಮೆಯ ದೊಡ್ಡ ಪರ್ವವೇ ನಡೆದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿಯ ಮುಖಂಡರು ಪಕ್ಷ ಬದಲಾವಣೆ ಮಾಡಿ ತಮ್ಮ ಭವಿಷ್ಯ ಬಲಪಡಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಕೆಲವರು ತಮ್ಮ ರಾಜಕೀಯ ಬದಲಾವಣೆಯನ್ನು ಅಧಿಕೃತವಾಗಿ ಘೊಷಿಸಿದ್ದು, ಇನ್ನು ಕೆಲವರು ವಿಪಕ್ಷಗಳ ಜತೆ ಸಂಪರ್ಕದಲ್ಲಿದ್ದು, ಅತ್ತ ಹಾರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿಯಿದೆ.

    ಕಾಂಗ್ರೆಸ್​ಗೆ ಗಾಯತ್ರಿ:2016ರ ಚುನಾವಣೆಯಲ್ಲಿ ಗೋಕರ್ಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಜಿಪಂ ಸದಸ್ಯೆಯಾಗಿದ್ದ ಗಾಯತ್ರಿ ಗೌಡ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಹಲವು ದಿನಗಳಿಂದ ಅವರು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಮನೆಗಳಿಗೆ ತೆರಳಿ ಪಕ್ಷಾಂತರಕ್ಕೆ ಸಿದ್ಧತೆ ನಡೆಸಿದ್ದು, ಒಂದೆರಡು ದಿನದಲ್ಲಿ ಅವರು ತಮ್ಮ ನಿಲುವನ್ನು ಅಧಿಕೃತವಾಗಿ ಘೊಷಿಸಲಿದ್ದಾರೆ. ಗಾಯತ್ರಿ ಗೌಡ ಅವರು 2010ರಲ್ಲಿ ಕಾಂಗ್ರೆಸ್ ಸದಸ್ಯೆಯಾಗಿ ಗೆದ್ದು ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಚನೆಯಾದ ಕೆಜೆಪಿ ಸೇರಿ 2013ರಲ್ಲಿ ಕುಮಟಾ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ಕೆಜೆಪಿ-ಬಿಜೆಪಿ ವಿಲೀನವಾದಾಗ ಕಮಲ ಪಕ್ಷದ ಜಿಪಂ ಟಿಕೆಟ್ ಪಡೆದು ಗೆದ್ದಿದ್ದರು.

    ಪ್ರದೀಪ ನಾಯಕ: ಜಿಪಂ ಹಾಲಿ ಸದಸ್ಯ ಜೆಡಿಎಸ್ ಮುಖಂಡ ಪ್ರದೀಪ ನಾಯಕ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರದೀಪ ನಾಯಕ ಅವರು ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆದರೆ, ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿರುವುದನ್ನು ನೋಡಿ ಅವರು ತೆನೆ ಇಳಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಜತೆ ಮಾತುಕತೆ ನಡೆಸಿದ್ದು, ಒಂದೆರಡು ದಿನದಲ್ಲಿ ಪಕ್ಷ ಬದಲಾವಣೆಯನ್ನು ಅಧಿಕೃತವಾಗಿ ಘೊಷಣೆ ಮಾಡುವುದಾಗಿ ತಿಳಿಸಿದ್ದಾರೆ.

    ಬಿಜೆಪಿ ಮನೆ ಬಾಗಿಲು ತಟ್ಟಿದ ಚೈತ್ರಾ: ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಹಾಲಿ ಅಧ್ಯಕ್ಷೆ, ಕಾಂಗ್ರೆಸ್​ನ ಚೈತ್ರಾ ಕೊಠಾರಕರ್ ಬಿಜೆಪಿ ಕದ ಬಡಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರನ್ನು ಸಂಪರ್ಕ ಮಾಡಿದ್ದು, ಈ ಕುರಿತು ಮಾತುಕತೆ ನಡೆದಿದೆ ಎಂದು ಚೈತ್ರಾ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಜತೆ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಡಾ. ವಿನಯಕುಮಾರ ರೆಡ್ಡಿ ಅವರು ಬುಧವಾರ ಕಾರವಾರದಲ್ಲಿ ಸುದ್ದಿಗೋಷ್ಠಿ ಮಾಡಿ, ಚೈತ್ರಾ ಬಿಜೆಪಿ ಸೇರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ, ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಉಂಟಾಗಲಿದೆ ಎಂದಿದ್ದಾರೆ. ಕಳೆದ ಜಿಪಂ ಚುನಾವಣೆಯಲ್ಲಿ ಚೆಂಡಿಯಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಚೈತ್ರಾ ಕೊಠಾರಕರ್ ಪಕ್ಷೇತರ ಅಭ್ಯರ್ಥಿ ರೂಪಾಲಿ ನಾಯ್ಕ ಅವರನ್ನು ಸೋಲಿಸಿದ್ದರು. ಜಿಪಂ ಚುನಾವಣೆಯ ಸೋಲಿನ ಬಳಿಕ ರೂಪಾಲಿ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕಾರವಾರ ಕ್ಷೇತ್ರದ ಶಾಸಕರಾಗಿದ್ದಾರೆ. ಪರಸ್ಪರ ಎದುರಾಳಿಗಳಾದ ಚೈತ್ರಾ ಹಾಗೂ ರೂಪಾಲಿ ಸಂಬಂಧ ಅಷ್ಟಕ್ಕಷ್ಟೇ ಇದೆ. ಈಗ ಚೈತ್ರಾ ಬಿಜೆಪಿ ಕದ ತಟ್ಟಿರುವುದು ಬಿಜೆಪಿ ಮನೆಯಲ್ಲಿ ಹೊಸ ಗೊಂದಲಕ್ಕೆ ಕಾರಣವಾಗಿದೆ.

    ಖಾಲಿಯಾದ ಜೆಡಿಎಸ್ ಮನೆ: ಉತ್ತರ ಕನ್ನಡ ಭಾಗದಲ್ಲಿ ಪ್ರಭಾವ ಹೊಂದಿದ್ದ ಜೆಡಿಎಸ್ ನಾಯಕ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದಿದ್ದು, ಕಾಂಗ್ರೆಸ್ ಕೋಟೆಗೆ ಕಾಲಿಟ್ಟಿದ್ದಾರೆ. ಪರಿಣಾಮ ಜಿಲ್ಲೆಯಲ್ಲೂ ಅವರ ಬೆಂಬಲಿಗರು ದಳ ಬಿಟ್ಟಿದ್ದಾರೆ. ಚುನಾವಣೆಗಳಲ್ಲಿ ನಿರಂತರ ಸೋಲಿನಿಂದ ನಿತ್ರಾಣವಾಗಿದ್ದ ಜೆಡಿಎಸ್ ಮನೆ ಈಗ ಪದಾಧಿಕಾರಿಗಳ ರಾಜೀನಾಮೆಯಿಂದ ಅಕ್ಷರಶಃ ಖಾಲಿಯಾಗುತ್ತಿದೆ. ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್. ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಟಾದ ಗಜು ನಾಯ್ಕ ಅವರು ಪಕ್ಷ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಯಲ್ಲಾಪುರ ತಾಲೂಕು ಅಧ್ಯಕ್ಷ ರವಿಚಂದ್ರ ನಾಯ್ಕ, ಸಿದ್ದಾಪುರ ತಾಲೂಕು ಅಧ್ಯಕ್ಷ ಎಸ್.ಕೆ.ನಾಯ್ಕ, ಕುಮಟಾ ನಗರ ಅಧ್ಯ್ಷ ಶ್ರೀಧರ ನಾಯ್ಕ ಕೂಡ ರಾಜೀನಾಮ ಪ್ರಕಟಿಸಿದ್ದಾರೆ. ಇನ್ನಷ್ಟು ಜನ ಈ ಪಟ್ಟಿಯಲ್ಲಿದ್ದಾರೆ. ಜೆಡಿಎಸ್​ನಲ್ಲಿ ಜಿಲ್ಲೆಯ ನಾಯಕರು ಎಂದು ಗುರುತಿಸಿಕೊಂಡ ಕಾರವಾರದ ಆನಂದ ಅಸ್ನೋಟಿಕರ್ ಹಾಗೂ ಸಿದ್ದಾಪುರದ ಶಶಿಭೂಷಣ ಹೆಗಡೆ ಅವರು ಪಕ್ಷ ಸಂಘಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಾಲದಲ್ಲಿ ಇಬ್ಬರು ಎಂಎಲ್​ಎ, ನಾಲ್ಕಾರು ಜಿಪಂ ಸದಸ್ಯರನ್ನು ಹೊಂದಿದ್ದ ಪಕ್ಷಕ್ಕೆ ಈಗ ಜಿಲ್ಲೆಯಲ್ಲಿ ಅಸ್ತಿತ್ವವೇ ಇಲ್ಲದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts