More

    ಜಿಲ್ಲೆಯಲ್ಲಿ ನರೇಗಾ ದುರುಪಯೋಗ

    ಚಿಕ್ಕಬಳ್ಳಾಪುರ : ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯು ಜಿಲ್ಲೆಯಲ್ಲಿ ದುರುಪಯೋಗವಾಗುತ್ತಿದೆ ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಆರೋಪಿಸಿದೆ.

    ಇಲ್ಲಿ ಹೆಸರಿಗೆ ಮಾತ್ರ ಜಾಬ್ ಕಾರ್ಡ್ ಸೃಷ್ಟಿಸಲಾಗುತ್ತಿದೆ. ಆದರೆ, ಸ್ಥಳೀಯರಿಗೆ ಕೆಲಸ ಕೊಡುತ್ತಿಲ್ಲ. ಜೆಸಿಬಿ ಮೂಲಕ ಕಾಮಗಾರಿ ಮುಗಿಸಿ, ನಿಯಮ ಬಾಹಿರವಾಗಿ ಹಣ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿಯಲ್ಲಿ ನಡೆದ ನರೇಗಾ ಕಾಮಗಾರಿ ನಿದರ್ಶನ ಎಂದು ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಅಧ್ಯಕ್ಷ ಎ.ಟಿ.ಶಂಕರ್ ಆರೋಪಿಸಿದರು.

    ತಾತಹಳ್ಳಿಯಲ್ಲಿನ ಸರ್ವೇ ನಂಬರ್ 91 ರ 100 ಎಕರೆ ಪ್ರದೇಶದಲ್ಲಿ ನರೇಗಾದಡಿ ಅರಣ್ಯ ಅಭಿವೃದ್ಧಿಪಡಿಸುತ್ತಿದ್ದು ಇದಕ್ಕಾಗಿ 80 ಲಕ್ಷ ರೂ ಅನುದಾನ ಮೀಸಲಿಡಲಾಗಿದೆ. ಆದರೆ, ಇಲ್ಲಿ ಕೂಲಿ ಕಾರ್ಮಿಕರ ಬದಲಿಗೆ ಜೆಸಿಬಿಯಲ್ಲಿ ಕೆಲಸ ನಡೆಯುತ್ತಿದ್ದು. ಸ್ಥಳೀಯ ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟಿಲ್ಲ. ಒಂದೆರಡು ದಿನದ ಉದ್ಯೋಗ ಸೃಷ್ಟಿ ತೋರ್ಪಡಿಕೆಗೆ, ಬೇರೆ ಭಾಗದಿಂದ ಜನರನ್ನು ಕರೆದುಕೊಂಡು ಬಂದು ನೇರವಾಗಿ ಕೆಲಸದ ಕೂಲಿ ಹಣ ನೀಡಲಾಗಿದೆ. ಕಾಮಗಾರಿ ನಾಮಲಕದಲ್ಲಿ ಕೆಲಸ ಪ್ರಾರಂಭ ಮತ್ತು ಮುಗಿದ ಮಾಹಿತಿ ಇಲ್ಲ. ಇನ್ನು 100 ಎಕರೆ ಪ್ರದೇಶದ ಕೆಲಸವನ್ನು ಮಾನವ ಸಂಪನ್ಮೂಲ ಬಳಸಿ ಬೇಗ ಮುಗಿಸಲಾಗಿದೆ ಎನ್ನುವುದೇ ಆಶ್ಚರ್ಯಕರ ವಿಚಾರ ಎಂದು ವ್ಯಂಗ್ಯವಾಡಿದರು.

    ದಳದ ರಾಜ್ಯ ಕಾರ್ಯದರ್ಶಿ ಮಧುಕುಮಾರ್ ಮಾತನಾಡಿ, ತಾತಹಳ್ಳಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್‌ಗೆ ದೂರು ಸಲ್ಲಿಸಲು ಸ್ಥಳೀಯ ಅಧಿಕಾರಿಗಳು ಬಿಡಲಿಲ್ಲ. ಕರೊನಾ ಸೋಂಕಿನಿಂದ ಪರಸ್ಪರ ಅಂತರ ಕಾಪಾಡುವಿಕೆ ನೆಪದಲ್ಲಿ ತಡೆದರು. ಇದಾದ ಬಳಿಕ ಅವ್ಯವಹಾರದ ಬಗ್ಗೆ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

    ಬಡ ಕಾರ್ಮಿಕರಿಗೆ ಉದ್ಯೋಗ ನೀಡದೆ ಗುತ್ತಿಗೆದಾರರ ಮೂಲಕ ಜೆಸಿಬಿಯಲ್ಲಿ ಕೆಲಸ ಮಾಡಿರುವುದರ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ದಳದ ರಾಜ್ಯ ಉಪಾಧ್ಯಕ್ಷ ವಿ.ಎಂ.ಮೂಸಾ, ಸಮಿತಿ ಸದಸ್ಯ ಲಕ್ಷ್ಮಣರಾಜ್, ಚಿಕ್ಕಬಳ್ಳಾಪುರ ನಗರ ಅಧ್ಯಕ್ಷ ಸುಧಾಕರ್ ಮತ್ತಿತರರು ಇದ್ದರು.

    ವಿಡಿಯೋ, ಚಿತ್ರ ಬಿಡುಗಡೆ: ತಾತಹಳ್ಳಿಯ ಅರಣ್ಯ ಪ್ರದೇಶದಲ್ಲಿ ಜೆಸಿಬಿ ಮೂಲಕ ಗುಂಡಿ ಅಗೆಸುತ್ತಿರುವ, ನೆಲ ಸಮತಟ್ಟುಗೊಳಿಸುತ್ತಿರುವ ವಿಡಿಯೋ ಮತ್ತು ಚಿತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಪ್ರಕಾರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts