More

    ಜಿಲ್ಲೆಯಲ್ಲಿ ಡೆಂಘೆ ಜ್ವರ ಹಾವಳಿ

    ಗದಗ: ಜಿಲ್ಲೆಯಲ್ಲಿ ಡೆಂಘೆ ಜ್ವರದ ಹಾವಳಿ ಹೆಚ್ಚಾಗಿ ಇಬ್ಬರು ಮಕ್ಕಳು ಮೃತಪಟ್ಟರೂ ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತಾಳಿದೆ.

    ಜಿಲ್ಲೆಯ 25-30 ಜನರಲ್ಲಿ ಶಂಕಿತ ಡೆಂಘೆ ಇದ್ದು, ಇಲ್ಲಿಯವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯಂದ ಬಡವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೋಣ ತಾಲೂಕಿನ ಕುರಡಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ರೋಣ ತಾಲೂಕಿನ ಕುರಡಗಿ ಗ್ರಾಮದ 5 ತಿಂಗಳ ಬಾಲಕಿ ಅಪೇಕ್ಷಾ ರಮೇಶ ಅರಹುಣಸಿ ಡೆಂಘೆ ಜ್ವರಕ್ಕೆ ಬಲಿಯಾಗಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಮಗುವನ್ನು ಗದಗ ನಗರದ ಪ್ರಸಿದ್ಧ ಖಾಸಗಿ ವೈದ್ಯರು ತಪಾಸಣೆ ಮಾಡಿದ್ದು, ಮಗುವಿನ ರಕ್ತದಲ್ಲಿ ಪ್ಲೇಟ್​ಲೇಟ್​ಗಳ ಸಂಖ್ಯೆ ಗಮನಾರ್ಹವಾಗಿ ಕುಸಿತ ಕಂಡಿದ್ದು ಡೆಂಘೆ ಜ್ವರದಿಂದ ಬಳಲುತ್ತಿದ್ದಾಳೆ ಎಂದು ಕಳೆದ ಗುರುವಾರ ವರದಿ ನೀಡಿದ್ದಾರೆ. ಬಾಲಕಿಯ ಪಾಲಕರು ಅದೇ ದಿನ ಧಾರವಾಡ ಎಸ್​ಡಿಎಂಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಅಪೇಕ್ಷಾ ಸೋಮವಾರ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿಯ ಅಜ್ಜ (ತಾಯಿಯ ತಂದೆ) ವಿರೂಪಾಕ್ಷಪ್ಪ ಗವಾರಿ ತಿಳಿಸಿದ್ದಾರೆ. ಇದಲ್ಲದೆ, ಶಂಕಿತ ಡೆಂಘೆ ಜ್ವರದಿಂದ ಬಳಲುತ್ತಿದ್ದ 8 ವರ್ಷದ ಬಾಲಕಿ ಚಿಕಿತ್ಸೆ ನಂತರ ಗುಣಮುಖವಾಗಿದ್ದಾಳೆ. ಇನ್ನೂ ಅನೇಕ ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ಆರೋಗ್ಯ ಇಲಾಖೆ ಇತ್ತ ಕಡೆಗೆ ಹರಿಸಿಲ್ಲ ಎಂದು ಅವರು ಆರೋಪಿಸಿದರು.

    ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ 10 ದಿನಗಳ ಹಿಂದೆ ಸಹ ಡೆಂಘೆ ಜ್ವರದಿಂದ 6 ತಿಂಗಳ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಇಷ್ಟಾದರೂ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಡೆಂಘೆ ಜ್ವರವೇ ಇಲ್ಲ ಎಂದು ಹೇಳುತ್ತಿರುವುದು ಸೋಜಿಗ ಮೂಡಿಸಿದೆ.

    ಆರೋಗ್ಯಾಧಿಕಾರಿಗಳ ದ್ವಂದ್ವ

    ಜಿಲ್ಲೆಯಲ್ಲಿ ಡೆಂಘೆ ಜ್ವರವೇ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ. ಸತೀಶ ಬಸರೀಗಿಡದ ಹೇಳುತ್ತಾರೆ. ಇದರ ಜತೆಗೆ ಜಿಲ್ಲೆಯಲ್ಲಿ ಶಂಕಿತ ಡೆಂಘೆ ಜ್ವರಕ್ಕೆ ಸಂಬಂಧಿಸಿದಂತೆ ತಿಂಗಳು 20-30 ಪ್ರಕರಣ ಕಂಡುಬರುತ್ತವೆ ಎಂದು ಹೇಳುತ್ತಾರೆ. ಒಂದು ಸಲ ಜ್ವರ ಇಲ್ಲ ಎನ್ನುವ ವೈದ್ಯರು ಮತ್ತೊಂದು ಸಲ ಶಂಕಿತ ಪ್ರಕರಣಗಳು ದಾಖಲಾಗಿವೆ ಎಂದು ದ್ವಂದ್ವ ಹೇಳಿಕೆ ನೀಡುತ್ತಾರೆ. ಇಲಾಖೆಯಿಂದ ಲಾರ್ವಾ ಸರ್ವೆ ಆರಂಭಿಸಲಾಗಿದೆ ಎಂದು ಸಹ ಹೇಳುತ್ತಾರೆ. ಹೀಗಾಗಿ, ಆರೋಗ್ಯ ಇಲಾಖೆ ಬಳಿ ಕಾಯಿಲೆ ಕುರಿತು ಸಮರ್ಪಕ ಉತ್ತರವೂ ಇಲ್ಲ, ಮಾಹಿತಿಯೂ ಇಲ್ಲ. ಆರೋಗ್ಯ ಇಲಾಖೆ ನಿರ್ಲಕ್ಷ್ಯಂದ ಜನರು ತೊಂದರೆ ಅನುಭವಿಸುವಂತಾಗಿದೆ.

    ಸೊಳ್ಳೆಗಳಿಂದ ಡೆಂಘೆ ಹರಡುತ್ತಿದೆ. ಆದ್ದರಿಂದ ಜನರು ಮನೆ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

    | ಡಾ. ಸತೀಶ ಬಸರೀಗಿಡದ, ಜಿಲ್ಲಾ ಆರೋಗ್ಯಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts