More

    ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆಗೆ ಕಡಿವಾಣ ಹಾಕಿ

    ಚಿತ್ರದುರ್ಗ: ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಬೇಜವಾಬ್ದಾರಿ ರಸ್ತೆ ನಿರ್ವಹಣೆಯಿಂದ ಅಪಘಾತಗಳು ಉಂಟಾಗಿ, ಸಾವು-ನೋವು ಸಂಭವಿಸಿದರೆ, ರಸ್ತೆ ನಿರ್ವಹಣೆ ಹೊಣೆ ಹೊತ್ತ ಸಂಬಂಧಿಸಿದ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.
    ಡಿಸಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಸಭೆಯಲ್ಲಿ ಮಾತನಾಡಿ, ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯಕಂಡು ಬಂದರೆ, ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಸಮಿತಿ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
    ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಸಂಖ್ಯೆಯಲ್ಲಿ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತೆ ಪರಿಶೀಲನೆ ನಡೆಸಬೇಕು. ನಿರ್ವಹಣೆ ತೊಂದರೆಯಿಂದ ಅಪಘಾತವಾದರೆ ಲೋಕೋಪಯೋಗಿ, ರಾ.ಹೆ.ಪ್ರಾಧಿಕಾರ, ಪಂ.ರಾಜ್ ಇಂಜಿನಿಯರಿಂಗ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳ ವಿರುದ್ಧ ಕ್ರಮ ಖಚಿತ ಎಂದರು.
    ಮುಂದಿನ ಮೂರು ತಿಂಗಳಲ್ಲಿ ಪರಿಸ್ಥಿತಿ ಸುಧಾರಣೆ ಆಗಬೇಕು. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿಸಬೇಕು. ಪಾರ್ಕಿಂಗ್, ಆಟೋ ನಿಲ್ದಾಣ ಹಾಗೂ ಜಾಹೀರಾತು ಪ್ರದರ್ಶನ ಸ್ಥಳಗಳನ್ನು ಗುರುತಿಸಿ ಅಧಿಸೂಚಿಸಬೇಕು. ರಸ್ತೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಸುರಕ್ಷತೆ ಗಮನದಲ್ಲಿ ಇಟ್ಟುಕೊಂಡು ನಿಯಮಗಳನ್ನು ವಿಧಿಸಬೇಕು ಎಂದು ಹೇಳಿದರು.
    ಸರಕು ಸಾಗಾಣೆ ವಾಹನಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಬಾರದು. ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಬೇಕು. ರಸ್ತೆ ಹಾಗೂ ವಾಹನ ಸಾಮರ್ಥ್ಯಕ್ಕಿಂತ ಅಧಿಕ ಭಾರ ಹೊತ್ತು ಸಾಗುವ ಅದಿರು ಸಾಗಿಸುವ ಲಾರಿಗಳ ಮಾಲೀಕರು/ ಚಾಲಕರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
    ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾಕಿರ್ಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ರಾ.ಹೆ. ಮತ್ತು ಸರ್ವಿಸ್ ರಸ್ತೆಗಳಲ್ಲಿ ಕಳ್ಳತನ ಪ್ರಕರಣಗಳಾಗುತ್ತಿದ್ದು, ಇಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಹೇಳಿದರು.

    *ವಾರ್ಷಿಕ 500 ಜನರ ಸಾವು
    ಅಪರಾಧ ಪ್ರಕರಣಗಳಡಿ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 23 ಜನರ ಹತ್ಯೆಯಾದರೆ, ರಸ್ತೆ ಅಪಘಾತದಲ್ಲಿ 500ಕ್ಕೂ ಅಧಿಕ ಅಮಾಯಕರು ಮೃತರಾಗುತ್ತಿದ್ದಾರೆ ಎಂದು ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಕಳವಳ ವ್ಯಕ್ತಪಡಿಸಿದರು.
    ಇದಕ್ಕೆ ಮುಖ್ಯ ಕಾರಣ, ಅವೈ ಜ್ಞಾನಿಕ ರಸ್ತೆ ನಿರ್ಮಾಣ, ಸಿಗ್ನಲ್ ಹಾಗೂ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಹಾಗೂ ಸಂಬಂಧಿಸಿದ ಅಧಿಕಾರಿಗಳು, ಚಾಲಕರ ನಿರ್ಲಕ್ಷೃ ಕಾರಣವಾಗಿದೆ. ಅಪಘಾತದಲ್ಲಿ ಚಿತ್ರದುರ್ಗಕ್ಕೆ ಅಪಖ್ಯಾತಿ ಗಳಿಸಿದೆ ಎಂದು ಬೇಸರಿಸಿದರು.
    ಹಿರಿಯೂರಿಂದ ಭರಮಸಾಗರ ರಾ.ಹೆ.ಹೆಚ್ಚಿನ ಅಪಘಾತಗಳಾಗುತ್ತಿವೆ. ಹಿರಿಯೂರು-ಬಳ್ಳಾರಿ ಹೆದ್ದಾರಿ, ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಗಳಲ್ಲೂ ಅಪಘಾತ ವಲಯಗಳಿವೆ. ಚಿತ್ರದುರ್ಗ-ಹೋಸಪೇಟೆ ಹೆದ್ದಾರಿ ಪಕ್ಕದಲ್ಲಿ ಲಾರಿ ನಿಲುಗಡೆ ನಿಷೇಧಿಸಲಾಗಿದ್ದು, ಗಸ್ತು ಹೆಚ್ಚಿಸಲಾಗಿದೆ ಎಂದರು.
    ಹಳೆಯ ಸರಕು ಸಾಗಾಟ ವಾಹನಗಳು, ಟ್ಯಾಕ್ಟರ್, ಲಾರಿ, ಟಿಪ್ಪರ್‌ಗಳ ಹಿಂಬದಿ ರಿಫ್ಲಕ್ಟರ್‌ಗಳು ಇಲ್ಲವಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಶೇಷ ಆಂದೋಲನ ನಡೆಸಬೇಕು ಎಂದು ಹೇಳಿದರು.
    ಪಿಡಬ್ಲುೃಡಿ ಇಇ ಮಲ್ಲಿಕಾರ್ಜುನ್, ಆರ್‌ಟಿಒ ಭರತ್ ಎಂ.ಕಾಳಿಸಿಂಗೆ, ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ನಗರಸಭೆ ಆಯುಕ್ತೆ ಎಂ.ರೇಣುಕಾ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts