More

    ಜಿಲ್ಲೆಗೆ ಬರುವವರ ಮೇಲೆ ನಿಗಾ

    ಕಾರವಾರ ಜಿಲ್ಲೆಯ ಹೊರಗಿನಿಂದ ಬರುವವರ ಮೇಲೆ ನಿಗಾ ವಹಿಸುವ ಕಾರ್ಯ ಇನ್ನು ಐದಾರು ತಿಂಗಳು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

    ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ರಚನೆಯಾದ ಕಾವಲು ಸಮಿತಿಗಳ ಸದಸ್ಯರು ಹಾಗೂ ಗ್ರಾಪಂ ಪಿಡಿಒಗಳ ಜತೆ ಯುಟ್ಯೂಬ್ ಲೈವ್​ನಲ್ಲಿ ಅವರು ಮಂಗಳವಾರ ಮಾತನಾಡಿದರು.

    ವಿದೇಶಗಳಲ್ಲಿ, ಹೊರ ರಾಜ್ಯ, ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸುಮಾರು 20 ಸಾವಿರ ಜನರು ಲಾಕ್​ಡೌನ್ ಮುಗಿಯುತ್ತಿದ್ದಂತೆ ಜಿಲ್ಲೆಗೆ ವಾಪಸಾಗುವ ನಿರೀಕ್ಷೆ ಇದೆ. ಎಲ್ಲರ ಮೇಲೆ ಅಧಿಕಾರಿಗಳು ನಿಗಾ ಇಡಲು ಸಾಧ್ಯವಿಲ್ಲ. ಇದರಿಂದ ಗ್ರಾಪಂ ಕಾವಲು ಸಮಿತಿಗಳು ಈ ಹಂತದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.

    ಹೊರ ದೇಶದಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಿಯೇ ಮನೆಗೆ ಕಳಿಸಲಾಗುವುದು. ಹೊರ ರಾಜ್ಯ, ಜಿಲ್ಲೆಯಿಂದ ಬರುವವರನ್ನು ತಪಾಸಣೆಗೆ ಒಳಪಡಿಸಿ ಎಲ್ಲ ಮಾಹಿತಿ ಪಡೆಯಲಾಗುವುದು. ಯಾವುದೇ ರೋಗದ ಲಕ್ಷಣ ಇದ್ದರೆ ಸಮೀಪದ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗುವುದು. ರೋಗ ಲಕ್ಷಣ ಇಲ್ಲದಿದ್ದರೂ ಅವರ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗುವುದು. ಅವರು, ಅವರ ಮನೆಯವರು 14 ದಿನ ಮನೆಯಿಂದ ಹೊರ ಬರದಂತೆ ಸೂಚಿಸಲಾಗುವುದು. ಮನೆಗೆ ಪತ್ರ ಅಂಟಿಸಲಾಗುವುದು. ಕಾವಲು ಸಮಿತಿ ಸದಸ್ಯರು ಮನೆಯವರಿಗೆ ಆಹಾರ, ನೀರು, ಔಷಧ ವ್ಯವಸ್ಥೆ ಮಾಡಬೆಕು ಎಂದರು.

    ಆರೋಗ್ಯ ಸಮೀಕ್ಷೆ: ಕಾವಲು ಸಮಿತಿ ಸದಸ್ಯರು ಪ್ರತಿ 10, 20 ಮನೆಗಳನ್ನು ಹಂಚಿಕೊಂಡು ಆಯಾ ಮನೆಗಳಲ್ಲಿ ಯಾವುದೇ ರೋಗ ಲಕ್ಷಣ ಇದ್ದರೂ ಸಂಬಂಧಪಟ್ಟ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ಹಾಗೆಂದು ಯಾವುದೇ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲ ಎಂದು ಎಚ್ಚರಿಸಿದರು. ಜಿಪಂ ಸಿಇಒ ಎಂ.ರೋಶನ್ ವಿಡಿಯೋ ಸಂವಾದ ನಿರ್ವಹಿಸಿದ್ದರು.

    ಗಂಟಲು ದ್ರವ ಸಂಗ್ರಹ: ಇಲ್ಲಿನ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೊಂಕಿತ ಗುಣಮುಖನಾಗಿದ್ದು, ಆತನ ಗಂಟಲ ದ್ರವದ ಮಾದರಿಯನ್ನು ಮಂಗಳವಾರ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ನೆಗೆಟಿವ್ ಬಂದಲ್ಲಿ ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ರಾಜ್ಯ ಸರ್ಕಾರ ಗುರುತಿಸಿದ ಬಣ್ಣದ ಪಟ್ಟಿಯಲ್ಲಿ ಉತ್ತರ ಕನ್ನಡ ಕಿತ್ತಳೆ ಝೋನ್​ನಲ್ಲಿದ್ದು, ಶೀಘ್ರ ಹಸಿರು ವಲಯಕ್ಕೆ ಬರುವ ನಿರೀಕ್ಷೆ ಇದೆ.

    500 ಮೀ. ಹೊರ ಹೋದರೆ ಗೊತ್ತಾಗುತ್ತೆ: ಹೊರ ಊರುಗಳಿಂದ ಬಂದು ಹೋಂ ಕ್ವಾರಂಟೈನ್​ಗೆ ಒಳಗಾಗುವವರ ಮಾಹಿತಿಯನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಲಾಗುವುದು. ಅವರು ಮನೆಯಿಂದ 500 ಮೀಟರ್ ಹೊರಗೆ ಹೋದರೆ ಕಂಟ್ರೋಲ್ ರೂಂಗೆ ಸಂದೇಶ ಬರಲಿದೆ. ಮೊಬೈಲ್ ಸ್ವಿಚಾಫ್ ಮಾಡಿದರೂ ಗೊತ್ತಾಗಲಿದೆ. ಪದೇ ಪದೆ ಮನೆಯಿಂದ ಹೊರ ಬರುವುದು ಕಂಡುಬಂದಲ್ಲಿ, ಅವರ ಮೇಲೆ ಎಫ್​ಐಆರ್ ದಾಖಲಿಸಲಾಗುವುದು. ತಪ್ಪು ಮುಂದುವರಿದಲ್ಲಿ ರೌಡಿ ಶೀಟರ್ ತೆರೆಯಲಾಗುವುದು ಎಂದು ಜಿಪಂ ಸಿಇಒ ತಿಳಿಸಿದರು.

    ಲಾಕ್​ಡೌನ್ ತುಸು ಸಡಿಲ: ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಲಾಕ್​ಡೌನ್ ನಿಯಮಾವಳಿಗಳನ್ನು ಕೊಂಚ ಸಡಿಲ ಮಾಡಲಾಗಿದೆ. ಇದರಿಂದ ಹಲವು ಅಂಗಡಿಗಳು ತೆರೆದುಕೊಂಡಿದ್ದು, ಜನ ಸಂಚಾರ ಹೆಚ್ಚಾಗಿದೆ. ಕೆಲವು ಹೋಟೆಲ್​ಗಳು ಪಾರ್ಸಲ್ ಸೇವೆ ಆರಂಭಿಸಿವೆ. ಹಾರ್ಡ್​ವೇರ್, ಇಲೆಕ್ಟ್ರಾನಿಕ್ಸ್, ಅಂಗಡಿಗಳೂ ತೆರೆದುಕೊಂಡಿವೆ. ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಯನ್ನು ಐಆರ್​ಬಿ ಪ್ರಾರಂಭಿಸಿದೆ. ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ನಿಧಾನಗತಿಯಲ್ಲಿ ಪ್ರಾರಂಭವಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts