More

    ಜಿಲ್ಲೆಗೆ ಇನ್ನೂ ಬಾರದ ಉಚಿತ ಹಾಲು

    ಹಾವೇರಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ, ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಗೆ ಕೆಎಂಎಫ್​ನಿಂದ ಬಡವರಿಗೆ ಉಚಿತ ಹಂಚಿಕೆಗೆ ವಿತರಣೆಯಾದ 5 ಸಾವಿರ ಲೀಟರ್ ಹಾಲು 2 ದಿನಗಳಿಂದ ಬಂದೇ ಇಲ್ಲ.

    ರೈತರಿಂದ ಖರೀದಿಸಿದ ಹಾಲು ಮಾರಾಟವಾಗದ ಕಾರಣಕ್ಕೆ ಕೆಎಂಎಫ್ ಹಾಲು ಖರೀದಿಯನ್ನು ಸೀಮಿತಗೊಳಿಸಿತ್ತು. ಇದರಿಂದ ರೈತರು ಹಾಲನ್ನು ಬೀದಿಗೆ ಚೆಲ್ಲಿದ ಘಟನೆಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಯಡಿಯೂರಪ್ಪ, ಏಪ್ರಿಲ್ 1ರಂದು ಕೆಎಂಎಫ್ ಅಧಿಕಾರಿಗಳ ಸಭೆ ನಡೆಸಿ ರೈತರ ಹಾಲನ್ನು ಕಡ್ಡಾಯವಾಗಿ ಖರೀದಿಸಬೇಕು. ಹೆಚ್ಚುವರಿ ಹಾಲನ್ನು ಜಿಲ್ಲಾಡಳಿತದ ಮೂಲಕ ಮಾಹಿತಿ ಪಡೆದು ನಿರಾಶ್ರಿತರು, ಬಡವರಿಗೆ ಏಪ್ರಿಲ್ 2ರಿಂದಲೇ ಹಂಚುವಂತೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲೆಗೆ ಕೆಎಂಎಫ್ ನಿತ್ಯ 5 ಸಾವಿರ ಲೀಟರ್ ಹಾಲನ್ನು ಉಚಿತವಾಗಿ ನೀಡಲು ಹಂಚಿಕೆ ಮಾಡಿತ್ತು.

    ಜಿಲ್ಲಾಡಳಿತ ಏಪ್ರಿಲ್ 1ರಂದು ಧಾರವಾಡ ಹಾಲು ಒಕ್ಕೂಟಕ್ಕೆ ಹಾಲನ್ನು ಎಲ್ಲಿ ಪೂರೈಸಬೇಕು ಎಂಬ ಮಾಹಿತಿ ನೀಡಿರಲಿಲ್ಲ. ಏ. 2ರಂದು ಇಂಡೆಂಟ್ ಕೊಡದೇ ಇರುವ ಪರಿಣಾಮ ಜಿಲ್ಲೆಗೆ ಹಾಲು ಪೂರೈಕೆಯಾಗಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಬಡವರಿಗೆ ಸಿಗಬೇಕಿದ್ದ ಸೌಲಭ್ಯವೂ ಸಿಗದಂತಾಗಿದೆ. ಜಿಲ್ಲೆಯ ವಿವಿಧೆಡೆ 486 ನಿರಾಶ್ರಿತರನ್ನು ಜಿಲ್ಲಾಡಳಿತವೇ ಗುರುತಿಸಿ ಅವರಿಗೆ ಉಚಿತವಾಗಿ ಆಹಾರ ಪೂರೈಸುತ್ತಿದೆ. ಅವರಿಗಾದರೂ ಏ. 2ರಿಂದ ಹಾಲು ಕೊಡಬಹುದಿತ್ತು. ಅದನ್ನು ಸಹ ಮಾಡದೇ ಇರುವುದು ಜಿಲ್ಲಾಡಳಿತದ ಕಾರ್ಯವೈಖರಿಗೆ ಜನ ಟೀಕಿಸುವಂತಾಗಿದೆ.

    ಜಿಲ್ಲೆಯ ಹಾಲು ಒಕ್ಕೂಟ ವ್ಯಾಪ್ತಿಯ ಅಧಿಸೂಚಿತ ಕೊಳಗೇರಿಗಳು, ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೊಳಗೇರಿಗಳು, ಕಟ್ಟಡ ಕಾರ್ವಿುಕರ ವಸತಿ ತಾಣಗಳು ಮತ್ತು ವಲಸಿಗ ಕಾರ್ವಿುಕರಿಗಾಗಿ ಆರಂಭಿಸಿರುವ ಪುನರ್ ವಸತಿ ಶಿಬಿರಗಳಲ್ಲಿ ಕುಟುಂಬವೊಂದಕ್ಕೆ ದಿನ ಒಂದು ಲೀಟರ್​ನಂತೆ ಹಾಲು ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ. ಏ. 3ರಿಂದ ಏ. 14 ರವರೆಗೆ ಉಚಿತವಾಗಿ ಸರ್ಕಾರ ಕೆಎಂಎಫ್ ಮೂಲಕ ಹಾಲು ವಿತರಣೆ ಮಾಡಲಿದೆ.

    ಜಿಲ್ಲಾಡಳಿತ ನಮಗೆ ಹಾಲು ಹಂಚಿಕೆಗೆ ಇಂಡೆಂಟ್ ಕೊಡದೇ ಇರುವ ಪರಿಣಾಮ ಎರಡು ದಿನಗಳಿಂದ ಉಚಿತ ಹಾಲು ವಿತರಣೆಯಾಗಿಲ್ಲ. ಶುಕ್ರವಾರ ಮಧ್ಯಾಹ್ನ ಇಂಡೆಂಟ್ ದೊರೆತಿದೆ. ಅದರಂತೆ ಹಾವೇರಿ ನಗರಕ್ಕೆ 750, ರಾಣೆಬೆನ್ನೂರ 1 ಸಾವಿರ, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ಸವಣೂರಿಗೆ ತಲಾ 500, ಹಿರೇಕೆರೂರ 400, ಬಂಕಾಪುರ, ಗುತ್ತಲಕ್ಕೆ 300ಲೀಟರ್ ಹಾಲನ್ನು ಶನಿವಾರ ಪೂರೈಸಲಾಗುವುದು.
    | ಬಸವರಾಜ ಅರಬಗೊಂಡ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts