More

    ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ!

    ಗದಗ: ಬಿಜೆಪಿ ಜಿಲ್ಲಾ ಘಟಕದಲ್ಲಿ ಪ್ರತಿಷ್ಠೆ, ಭಿನ್ನಮತ, ಒಳಜಗಳ, ಗುಂಪುಗಾರಿಕೆ ಮಿತಿಮೀರಿದೆ. ವಿವಿಧ ಹುದ್ದೆಗಳಿಗೆ ನೇಮಕ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರಲ್ಲಿ ಮುಸುಕಿನ ಗುದ್ದಾಟ ಜೋರಾಗಿದ್ದು, ಕಾರ್ಯಕರ್ತರು ರೋಸಿ ಹೋಗಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದ ಮೇಲೆ ಜಿಲ್ಲಾ ಘಟಕದಲ್ಲಿ ಬಣಗಳು ಹುಟ್ಟಿಕೊಂಡಿದ್ದು, ಒಬ್ಬರಿಗೊಬ್ಬರು ಕಾಲೆಳೆಯುವ ಕೆಲಸ ಆರಂಭಿಸಿರುವುದು ನೋವಿನ ಸಂಗತಿ ಎಂದು ಪಕ್ಷದ ಅನೇಕ ಹಿರಿಯ ಮುಖಂಡರು, ಕಾರ್ಯಕರ್ತರು ನೊಂದು ಮಾತನಾಡುತ್ತಿದ್ದಾರೆ. ಯಾಕಾದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು? ಅಧಿಕಾರ ಇಲ್ಲದಿದ್ದಾಗ ಯಾವುದೇ ರಗಳೆ ಇಲ್ಲದೇ ನಡೆದುಕೊಂಡು ಹೋಗುತ್ತಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗೆ ಜರುಗಿದ ಮಂಡಲ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಜನರಿಗೆ ಪರಿಚಯವೇ ಇಲ್ಲದಂತಹ ವ್ಯಕ್ತಿಗಳನ್ನು (ಗದಗ ವಿಧಾನಸಭೆ ಕ್ಷೇತ್ರದ ಗದಗ ನಗರ ಮಂಡಲ ಅಧ್ಯಕ್ಷರಾಗಿ ಮಹಾಂತೇಶ ನಾಲ್ವಾಡ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷರಾಗಿ ಮಹೇಶ ಶಿರಹಟ್ಟಿ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರಿಂದ ಗೊಂದಲ ಹೆಚ್ಚಾಗಿದೆ. ಆಕಾಂಕ್ಷಿಗಳು ಮುಖಂಡರ ನಿರ್ಧಾರವನ್ನು ಬಹಿರಂಗವಾಗಿಯೇ ಖಂಡಿಸುತ್ತಿದ್ದಾರೆ. ಜಿಲ್ಲಾ ಮುಖಂಡರು ತಮಗೆ ಬೇಕಾದವರನ್ನು ಪಕ್ಷದ ಹುದ್ದೆಗಳಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹತ್ತಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಲಿಲ್ಲ ಎಂದು ಆರೋಪ ಕೇಳಿಬಂದಿದೆ.

    ಈ ಕುರಿತು ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಮಂಡಲ ಅಧ್ಯಕ್ಷರ ಚುನಾವಣೆಯಲ್ಲಿ ಗದಗ ಶಹರ, ಗದಗ ಗ್ರಾಮೀಣ ಮಂಡಲದ ಅಧ್ಯಕ್ಷ ಪ್ರಕ್ರಿಯೆ ಕುರಿತಂತೆ ಗಲಾಟೆ ನಡೆದಿದೆ. ಕಾರ್ಯಕರ್ತರು ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೀಕ್ಷಕ ಮಹೇಶ ಟೆಂಗಿನಕಾಯಿ ಅವರನ್ನು ಅನೇಕ ಕಾರ್ಯಕರ್ತರು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ನೇರವಾಗಿ ಪ್ರಶ್ನಿಸಿದ್ದಾರೆ. ದುಡಿದವರಿಗೆ ಅವಕಾಶ ನೀಡುತ್ತಿಲ್ಲ ಏಕೆ ಎಂದು ಅನೇಕರು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಕೆಲವರು ಮಾಧ್ಯಮದ ಮೂಲಕ ಜಿಲ್ಲಾ ಘಟಕದಲ್ಲಿ ನಡೆಯುತ್ತಿರುವ ಜಾತಿ ಲಾಬಿ, ಒಂದೆರಡು ಸಮುದಾಯಕ್ಕೆ ಅಧಿಕಾರ ಸೀಮಿತಗೊಂಡಿರುವುದನ್ನು ಆಕ್ಷೇಪಿಸಿದ್ದಾರೆ.

    ಬಿಜೆಪಿ ಜಿಲ್ಲಾ ಘಟಕದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದ ಪಕ್ಷದ ಮಾನ ಬೀದಿಪಾಲಾಗುತ್ತಿರುವುದು ಸುಳ್ಳಲ್ಲ. ಕಷ್ಟ ಪಟ್ಟು ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದು ನಿಲ್ಲಿಸಿದ ಕಾರ್ಯಕರ್ತರ ಕೂಗಿಗೆ ನಯಾಪೈಸೆ ಕಿಮ್ಮತ್ತು ಇಲ್ಲದಂತಾಗಿದೆ ಎಂಬ ಆರೋಪಗಳು ಕೇಳಬರುತ್ತಿವೆ.

    ಅಲ್ಲದೆ, ಜಿಲ್ಲಾ ಬಿಜೆಪಿಯಲ್ಲಿ ಶಿಸ್ತಿನ ಕೊರತೆ ಎದ್ದು ಕಾಣುತ್ತಿದ್ದು, ಗುಂಪುಗಾರಿಕೆ ಮಿತಿಮೀರಿದೆ. ಸಚಿವರಿಗೆ ನಿಷ್ಠರಾಗಿರುವ ಗುಂಪು, ಶಾಸಕರಿಗೆ ನಿಷ್ಠೆವುಳ್ಳವರ ಗುಂಪು, ಪಕ್ಷದ ಸಿದ್ಧಾಂತ ಒಪ್ಪಿಕೊಂಡವರ ಗುಂಪು, ಪ್ರಧಾನಿ ಮೋದಿ ಅವರನ್ನು ಪ್ರೀತಿಸುವ ಗುಂಪು… ಹೀಗೆ ಹತ್ತಾರು ಗುಂಪುಗಳು ಹುಟ್ಟಿಕೊಂಡಿದ್ದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಹಿಡಿತ ಸಾಧಿಸಲು ಪ್ರಯತ್ನ: ಸಚಿವ ಸಿ.ಸಿ. ಪಾಟೀಲ ಅವರಿಗೆ ನಿಷ್ಠರಾಗಿರುವ ಗುಂಪು ಎನ್ನಲಾಗಿರುವ ಕೆಲವರು ಪಕ್ಷದ ಸಂಪೂರ್ಣ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಪಕ್ಷವನ್ನು ಪ್ರೖೆವೇಟ್ ಕಂಪನಿ ಮಾಲೀಕತ್ವದ ರೀತಿಯಲ್ಲಿ ಪರಿಗಣಿಸುತ್ತಿರುವುದರಿಂದ ಅಸಮಾಧಾನ ಸ್ಪೋಟಗೊಂಡಿದೆ ಎಂದು ಹಲವಾರು ಕಾರ್ಯಕರ್ತರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts