More

    ಜಿಲ್ಲಾ ಕಲ್ಪಿತ ಯುವ ಸಂಸತ್ ಸ್ಪರ್ಧೆ -ಕಲಾಪದಲ್ಲಿ ಗ್ಯಾರಂಟಿ ಯೋಜನೆಗಳ ಬಿಸಿ ಚರ್ಚೆ

    ದಾವಣಗೆರೆ: ಆರ್ಥಿಕ ಯೋಜನೆಗಳಿಲ್ಲದ ಮಹಮ್ಮದ್ ಬಿನ್ ತುಘಲಕ್ ಆಡಳಿತದ ಬಗ್ಗೆ ಕೇಳಿದ್ದೆವು. ರಾಜ್ಯದಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ಮಂಕುಬೂದಿ ಎರಚಿದೆ. ಎಲ್ಲ ಜನರಿಗೂ ಯೋಜನೆಗಳು ತಲುಪಿಲ್ಲ. ಹಾವು ಹೊಡೆದು ಹದ್ದಿಗೆ ಹಾಕಿದಂತೆ ಎಂಬ ಮಾತಿದೆ. ಅದರಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಗ್ಯಾರಂಟಿ ಯೋಜನೆಗಳ ಹಣಕ್ಕೆ ಹೊಂದಾಣಿಕೆ ಮಾಡುತ್ತಿದೆ..
    ಶುಕ್ರವಾರ ಆಯೋಜಿಸಿದ್ದ ವಿಧಾನಸಭೆ ಕಲಾಪದಲ್ಲಿ ವಿಪಕ್ಷ ಸದಸ್ಯರು ಈ ವಿಚಾರ ಚರ್ಚೆಗೆಳೆದು ಸರ್ಕಾರದ ವಿರುದ್ಧ ಹರಿಹಾಯ್ದರು. ಇದಕ್ಕೆ ಉತ್ತರ ನೀಡಿದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ವರ್ಚಸ್ಸು ಹೆಚ್ಚಿದೆ. ಇದನ್ನು ಸಹಿಸಲಾಗದೆ ವಿಪಕ್ಷದವರು ಆರೋಪ ಮಾಡುತ್ತಿದ್ದಾರೆ. ಅನೇಕ ವರ್ಷದಿಂದ ಆಡಳಿತ ಮಾಡಿದ ನಮಗೆ ಇದರ ಆಳ-ಅಗಲ ಗೊತ್ತಿದೆ. ಬೆಲೆ ಏರಿಕೆಯನ್ನು ಶೀಘ್ರವೇ ನಿಯಂತ್ರಣ ಮಾಡುತ್ತೇವೆ ಎಂದರು.
    ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. 8ರಿಂದ 10 ಲಕ್ಷ ರೂ.ಗೆ ಹುದ್ದೆ ಮಾರಾಟವಾಗುತ್ತಿವೆ. ಇದರ ಬಗ್ಗೆ ಪೆನ್‌ಡ್ರೈವ್, ಸಿಡಿ ದಾಖಲೆಗಳಿವೆ ಎಂದು ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಪ್ರಸ್ತಾಪಿಸಿದರು. ಕಾನೂನುಬಾಹಿರವಾಗಿ ವರ್ಗಾವಣೆ ಮಾಡುತ್ತಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು.
    ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರವಾಗಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಸದನದ ಒಳಗೆ ಹೊರಗೂ ಧರಣಿ ನಡೆಸುವುದಾಗಿ ವಿಪಕ್ಷದವರು ಹೇಳಿದರು. ವಿಪಕ್ಷದವರೊಂದಿಗೆ ಪ್ರಧಾನಿ ಬಳಿ ತೆರಳಿ ಸಮಸ್ಯೆ ಬಗಹರಿಸುದಾಗಿ ಸಿಎಂ ಪ್ರತಿಕ್ರಿಯಿಸಿದರು. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಸ್ಪೀಕರ್ ಕಿವಿಮಾತು ಹೇಳಿದರು.
    ಅಂದ ಹಾಗೆ ಇದು ನಡೆದದ್ದು ಬೆಂಗಳೂರು ಅಥವಾ ಬೆಳಗಾವಿ ಸುವರ್ಣಸೌಧದಲ್ಲೂ ಅಲ್ಲ. ದಾವಣಗೆರೆ ಜಿಲ್ಲಾ ಪಂಚಾಯ್ತಿಯಲ್ಲಿ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಕಲ್ಪಿತ ಯುವ ಸಂಸತ್ ಸ್ಪರ್ಧೆಯಲ್ಲಿ ದಾವಣಗೆರೆ ಉತ್ತರ ವಲಯ ತಂಡ (ಮೆಳ್ಳೇಕಟ್ಟೆ ಶಾಲೆ)ದ ವಿದ್ಯಾರ್ಥಿಗಳು ನಡೆಸಿದ ವಿಧಾನಸಭೆ ಕಲಾಪದ ವಾಗ್ಝರಿಯ ವಿಶೇಷಗಳಿವು.
    ಜಿಲ್ಲೆಯ ಐದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಚನ್ನಗಿರಿ ತಾಲೂಕು ತಂಡ ಗೈರಾಗಿತ್ತು. ತಲೆಗೆ ಟೋಪಿ, ಕೊರಳಿಗೆ ಶಲ್ಯ ಧರಿಸಿದ್ದ ಶ್ವೇತ ವಸ್ತ್ರಧಾರಿಗಳು, ಕೆಲವರಿಗೆ ಕುರ್ತಾದ ಆಕರ್ಷಣೆ, ಸ್ಪೀಕರ್ ಹೊಂದಿದ್ದ ಹೆಡ್‌ಫೋನ್, ಜನಪ್ರತಿನಿಧಿಗಳಂತೆ ಕಡತಗಳನ್ನಿಡಿದು ಭಾಗವಹಿಸಿದ್ದ ಮಕ್ಕಳು ಅರಳು ಹುರಿದಂತೆ ಮಾತನಾಡಿದರು. ಪ್ರಶ್ನಿಸುವ ಮತ್ತು ಥಟ್ಟನೇ ಉತ್ತರಿಸುವ ವೈಖರಿ, ಸಭಾ ಗಾಂಭೀರ್ಯ ಎಲ್ಲವೂ ಗಮನ ಸೆಳೆದವು. ಕೆಲ ಮಕ್ಕಳು ಸಭಾ ಕಂಪನದಿಂದ ಮಾತನಾಡಲು ತಡವರಿಸಿದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts