More

    ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶನ: ಕಾಂಗ್ರೆಸ್‌ನ 8 ಕಾರ್ಯಕರ್ತರ ಬಂಧನ


    ಮೈಸುರು : ಪೊಲೀಸರ ಕಣ್ತಪ್ಪಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಕಾಂಗ್ರೆಸ್‌ನ 8 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ತಿ.ನರಸೀಪುರ ತಾಲೂಕಿನ ಮೂಗೂರಿನಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಿ.ನರಸೀಪುರ ಮಾರ್ಗವಾಗಿ ಉಸ್ತುವಾರಿ ಸಚಿವ ಎಸ್.ಟಿ.ಸೋಮವಶೇಖರ್ ತೆರಳುತ್ತಿದ್ದರು.


    ಕೊಡಗಿನಲ್ಲಿ ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ತಿ. ನರಸೀಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 212ರ ಗರ್ಗೇಶ್ವರಿ ಮತ್ತು ತಿ.ನರಸೀಪುರ ಪಟ್ಟಣದ ಚಿಕ್ಕಮ್ಮ ತಾಯಿ ಛತ್ರದ ಬಳಿ ಕಾಯುತ್ತಿದ್ದರು.
    ಆದರೆ ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಸಚಿವರು ಬರುವ ಮುನ್ನವೇ ಹಲವರನ್ನು ವಶಕ್ಕೆ ಪಡೆದರು. ಆದರೆ ಪುರಸಭೆ ಮಾಜಿ ಅಧ್ಯಕ್ಷ ಎನ್.ಸೋಮು, ಗ್ರಾ.ಪಂ. ಮಾಜಿ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜು, ಬಾರ್ ಕುಮಾರ್, ಚೌಹಳ್ಳಿ ಮಲ್ಲೇಶ್, ವೆಂಕಿ, ಕಿರಗಸೂರು ಕುಮಾರ್ ಪೊಲೀಸರ ಕಣ್ತಪ್ಪಿಸಿ ತಿ.ನರಸೀಪುರ ಪಟ್ಟಣದ ಚಿಕ್ಕಮ್ಮ ತಾಯಿ ಛತ್ರದ ಬಳಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು.

    ಮಾಹಿತಿ ಅರಿತು ಮುಂಚಿತವಾಗಿ ವಶಕ್ಕೆ ಪಡೆದಿದ್ದರು :
    ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಪುರಸಭೆ ಅಧ್ಯಕ್ಷ ಮದನ್ ರಾಜ್, ಮಾಜಿ ಅಧ್ಯಕ್ಷ ಸೋಮು ಹಾಗೂ ಸದಸ್ಯ ಸಹೀದ್ ಅಹಮದ್ ನೇತೃತ್ವದಲ್ಲಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕಾಂಗ್ರೆಸ್ ಕಾರ್ಯಕರ್ತರು ಸನ್ನದ್ಧರಾಗಿದ್ದರು.
    ಈ ಬಗ್ಗೆ ಮಾಹಿತಿ ಅರಿತ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಡಿವೈಎಸ್ಪಿ ಗೋವಿಂದರಾಜು, ಪಿಎಸ್‌ಐಗಳಾದ ಕೃಷ್ಣಪ್ಪ ಪ್ರತಿಭಟನಾನಿರತರ ಮನವೊಲಿಕೆಗೆ ಮುಂದಾದರು. ಆದರೆ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶನ ಮಾಡೇ ತೀರುವುದಾಗಿ ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಖಾಸಗಿ ವಾಹನದಲ್ಲಿ ಕರೆದೊಯ್ದರು.
    ಬಿ.ಮರಯ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನವನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಆದರೆ, ಸರ್ಕಾರ ಪೊಲೀಸರ ಮುಖಾಂತರ ನಮ್ಮನ್ನು ಬಂಧಿಸಿ ನಮ್ಮ ಹಕ್ಕನ್ನು ಕಸಿದುಕೊಂಡಿದೆ. ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.
    ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅಹಮದ್ ಸಯ್ಯದ್ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತೀಯವಾದವನ್ನು ಬೆಂಬಲಿಸುತ್ತಿದೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts