More

    ಜಿಲ್ಲಾಮಟ್ಟದ ಉದ್ಯೋಗಮೇಳಕ್ಕೆ ಚಾಲನೆ

    ಹಾವೇರಿ: ಜಿಲ್ಲಾಮಟ್ಟದ ಉದ್ಯೋಗಮೇಳವನ್ನು ಪ್ರತಿ ಆರು ತಿಂಗಳಿಗೊಮ್ಮೆ ಹಾಗೂ ವಿಭಾಗವಾರು ಆಯೋಜಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜ್ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಐಟಿಐ, ಡಿಪ್ಲೊಮಾ ಸೇರಿ ಬೇರೆಬೇರೆ ವಿದ್ಯಾರ್ಹತೆ, ವೃತ್ತಪರ ತರಬೇತಿ ಹಾಗೂ ಸೆಕ್ಯೂರಿಟಿ ಗಾರ್ಡ್, ನರ್ಸ್, ವಾಹನ ಚಾಲಕ ಹುದ್ದೆಯಂತಹ ಬಹು ಬೇಡಿಕೆಯ ಉದ್ಯೋಗಾವಕಾಶಕ್ಕೆ ತಕ್ಕಂತೆ ವಿಭಾಗವಾರು ಉದ್ಯೋಗ ಮೇಳ ನಡೆಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದರು.

    ಮೇಳದಲ್ಲಿ 7 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅಂದಾಜು 3,500 ಉದ್ಯೋಗಾವಕಾಶಗಳು ಲಭ್ಯವಿವೆ. 56 ಕಂಪನಿಗಳು ಭಾಗವಹಿಸಿವೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನವಿದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ. ಇಂದಿನ ಜಾಗತಿಕ ಕಾಲಮಾನಕ್ಕೆ ತಕ್ಕಂತೆ ಉದ್ಯೋಗಾವಕಾಶಗಳನ್ನು ಹೊಂದಲು ಕೌಶಲಾಧಾರಿತ ಶಿಕ್ಷಣ ಕಲಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕೌಶಲಾಧಾರಿತ ಪಠ್ಯಕ್ರಮ ಜಾರಿಗೊಳಿಸಲು ಕರಡು ಸಿದ್ಧಗೊಂಡಿದೆ. ಮುಂದಿನ ಅಧಿವೇಶನದಲ್ಲಿ ಅದು ಜಾರಿಯಾಗುವ ವಿಶ್ವಾಸವಿದೆ ಎಂದರು.

    ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಎಸ್​ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಸುಭಾಸ ಗೌಡರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.

    ಕೌಶಲ ಶಿಕ್ಷಣ ವ್ಯವಸ್ಥೆ ನಮ್ಮದಾಗಲಿ
    ನಮ್ಮ ಶಿಕ್ಷಣ ವ್ಯವಸ್ಥೆಯು ಬ್ರಿಟಿಷ್ ಕಾಲದ್ದಾಗಿದೆ. ಬ್ರಿಟಿಷರು ಕ್ಲರ್ಕ್​ಗಳನ್ನು ಸೃಷ್ಟಿಸುವ ಶಿಕ್ಷಣ ವ್ಯವಸ್ಥೆ ಮಾಡಿದ್ದರು. ಈಗಲೂ ಅದೇ ಮುಂದುವರಿದಿದೆ. ಕೌಶಲವನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಾದರೆ ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಾವಕಾಶ ಹೊಂದಲು ಸಾಧ್ಯವಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳ ವ್ಯತ್ಯಾಸವಿದೆ. ಇಂತಹ ಬದಲಾವಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಪೈಪೋಟಿ ಕಷ್ಟವಾಗಿದೆ. ಅದು ಬದಲಾಗಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

    2,154 ಅಭ್ಯರ್ಥಿಗಳು: ಮೊದಲ ದಿನ 2,154 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಉದ್ಯೋಗಾಕಾಂಕ್ಷಿಗಳಿಗೆ ನೋಂದಣಿ, ಸಂದರ್ಶನಕ್ಕಾಗಿ 10 ಕೌಂಟರ್​ಗಳನ್ನು ತೆರೆಯಲಾಗಿತ್ತು. ಐಟಿಐ ಕಾಲೇಜ್​ನ ಹಾಗೂ ಖಾಸಗಿ ಕೌಶಲ ತರಬೇತಿ ಕೇಂದ್ರ ಸಿಬ್ಬಂದಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಲ್ಲ ಅಭ್ಯರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts