More

    ಜಿಲ್ಲಾದ್ಯಂತ ಕಳೆಗಟ್ಟಿದ ವಿಜಯದಶಮಿ ಸಂಭ್ರಮ

    ಬೆಳಗಾವಿ: ಬೆಳಗಾವಿ ಮಹಾನಗರ ಸೇರಿ ಜಿಲ್ಲಾದ್ಯಂತ ಮಂಗಳವಾರ ಮತ್ತು ಬುಧವಾರ ಜನರು ಸಂಭ್ರಮದಿಂದ ದಸರಾ ಹಬ್ಬ ಆಚರಿಸಿದರು. ನಗರದ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನ, ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಹನುಮಾನ ದೇವಸ್ಥಾನ, ಕೋಟೆ ಆವರಣದಲ್ಲಿರುವ ದುರ್ಗಾದೇವಿ ದೇವಸ್ಥಾನ ಸೇರಿ ನಗರದ ವಿವಿಧ ದೇವಸ್ಥಾನಗಳು, ಸವದತ್ತಿ ಯಲ್ಲಮ್ಮ, ಗೊಡಚಿ ವೀರಭದ್ರೇಶ್ವರ, ಕಲ್ಲೋಳಿ ಹನುಮ ದೇವಸ್ಥಾನಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಅವುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬುಧವಾರ ಬೆಳಗ್ಗೆಯಿಂದಲೇ ಭಕ್ತರು ದೇಗುಲಕ್ಕೆ ಬಂದು ಧಾರ್ಮಿಕ ವಿಧಿ-ವಿಧಾನ ಕೈಗೊಂಡರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವರಿಗೆ ಕಾಣಿಕೆಗಳನ್ನು ಅರ್ಪಿಸಿ ಹರಕೆ ತೀರಿಸಿದರು. ಬದುಕಿನಲ್ಲಿ ಸಮೃದ್ಧಿ ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಕಂಪನಿಗಳ ಕಚೇರಿಗಳು, ಕಾರ್ಖಾನೆಗಳು, ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳಲ್ಲಿ ಬುಧವಾರ ಕೃಷಿ ಪರಿಕರಗಳು, ನಿತ್ಯ ಬಳಸುವ ಆಯುಧಗಳು ಹಾಗೂ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು. ಕೆಲ ದೇವಸ್ಥಾನಗಳಲ್ಲಿ 9 ದಿನಗಳಿಂದ ಜರುಗಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಮತ್ತೊಂದೆಡೆ ನವರಾತ್ರಿ ಹಬ್ಬದ ಬನ್ನಿ ಮುಡಿಯುವ ದಿನವಾಗಿದ್ದರಿಂದ ಬುಧವಾರ ನಗರದ ಅನ್ವೇಕರ್, ಪೊದಾರ ಸೇರಿ ವಿವಿಧ ಬಂಗಾರದ ಅಂಗಡಿಗಳಲ್ಲಿ ಜನರು ಚಿನ್ನಾಭರಣಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡುಬಂತು.

    ಸೀಮೋಲ್ಲಂಘನ: ಇಲ್ಲಿನ ಕ್ಯಾಂಪ್ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಬುಧವಾರ ವಿಜಯದಶಮಿ ಪ್ರಯುಕ್ತ ಸೀಮೋಲ್ಲಂಘನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇಲ್ಲಿನ ಪಾಟೀಲ ಗಲ್ಲಿಯ ವತನದಾರ್ ಪಾಟೀಲ (ಪೊಲೀಸ್‌ಪಾಟೀಲ) ಮನೆತನದ ನೇತೃತ್ವದಲ್ಲೇ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಬೆಳಗಾವಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದ ಬಂದಿದ್ದ ಸಾವಿರಾರು ಜನರೂ ಇದಕ್ಕೆ ಸಾಕ್ಷಿಯಾದರು. ಚವಾಟ್ ಗಲ್ಲಿಯ ಜ್ಯೋತಿಬಾ ಮಂದಿರದಿಂದ ಪಲ್ಲಕ್ಕಿ ಹಾಗೂ ಅಲಂಕೃತ ಎತ್ತಿನ ಮೆರವಣಿಗೆ ಆರಂಭಗೊಂಡಿತು. ಹುತಾತ್ಮ ಚೌಕ್ ಬಳಿ ವಿವಿಧ ದೇವಾಲಯಗಳ 11 ಪಲ್ಲಕ್ಕಿಗಳು ಸಮಾವೇಶಗೊಂಡು, ಮೆರವಣಿಗೆ ಮೂಲಕ ವಿವಿಧ ಮಾರ್ಗಗಳಲ್ಲಿ ಸಾಗಿ ವಿದ್ಯಾನಿಕೇತನ ಶಾಲೆಯ ಮೈದಾನ ತಲುಪಿದವು. ಅಲ್ಲಿ ಧಾರ್ಮಿಕ ಆಚರಣೆ ಪೂರ್ಣಗೊಂಡ ನಂತರ, ಬನ್ನಿ ಮುಡಿಯುವ ಮೂಲಕ ವೈಭವದ ದಸರೆಗೆ ತೆರೆ ಎಳೆಯಲಾಯಿತು. ಕ್ಯಾಂಪ್ ಪ್ರದೇಶದಲ್ಲಿ ದೇವರ ಬನ್ನಿ ಮುಡಿಯುವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts