More

    ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ

    ಹಾವೇರಿ: ಹಾವೇರಿ ಜಿಪಂ ಅಧ್ಯಕ್ಷರಾಗಿದ್ದ ಬಸನಗೌಡ ದೇಸಾಯಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಅ. 22ರಂದು ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಏಕನಾಥ ಬಾನುವಳ್ಳಿ ಹಾಗೂ ರಾಘವೇಂದ್ರ ತಹಸೀಲ್ದಾರ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ.

    ಅಧ್ಯಕ್ಷ ಸ್ಥಾನದ ಅವಧಿ ಕೇವಲ 7 ತಿಂಗಳು ಉಳಿದಿದೆ. ಅಧ್ಯಕ್ಷರಾಗಲು ರಾಣೆಬೆನ್ನೂರ ತಾಲೂಕು ಕಾಕೋಳ ಜಿಪಂ ಕ್ಷೇತ್ರದ ಏಕನಾಥ ಬಾನುವಳ್ಳಿ, ಹಾನಗಲ್ಲ ತಾಲೂಕು ಹಿರೂರು ಕ್ಷೇತ್ರದ ರಾಘವೇಂದ್ರ ತಹಸೀಲ್ದಾರ್, ಸವಣೂರ ತಾಲೂಕು ಹತ್ತಿಮತ್ತೂರ ಜಿಪಂ ಕ್ಷೇತ್ರದ ಶಿವರಾಜ ಅಮರಾಪುರ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

    ಒಟ್ಟು 34 ಸದಸ್ಯ ಬಲವಿದ್ದ ಜಿಪಂನಲ್ಲಿ ಸದ್ಯ ಬಸನಗೌಡ ದೇಸಾಯಿ ಅವರ ನಿಧನದಿಂದ ಸದಸ್ಯರ ಸಂಖ್ಯೆ 33ಕ್ಕಿಳಿದಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು 17 ಸದಸ್ಯರ ಬೆಂಬಲ ಬೇಕಿದೆ. ಇದರಲ್ಲಿ ಕಾಂಗ್ರೆಸ್​ನ 21ಸದಸ್ಯರಿದ್ದು, ಬಿಜೆಪಿಯ 12 ಸದಸ್ಯರಿದ್ದಾರೆ. ಬಿಜೆಪಿಯು ಬಹುಮತದಿಂದ ಬಹುದೂರವಿದೆ.

    ಹೈಕಮಾಂಡ್​ಗೆ ಬಿಕ್ಕಟ್ಟು: ಕೈ ಹೈಕಮಾಂಡ್​ಗೆ ಸೂಕ್ತ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಸದಸ್ಯರಲ್ಲಿ ಒಮ್ಮತ ಮೂಡಿಸಲು ಸಾಧ್ಯವಾಗದಿರುವ ಪರಿಣಾಮ ಸೋಮವಾರ ಕೆಪಿಸಿಸಿ ಅಧ್ಯಕ್ಷರ ಬಳಿ ಸದಸ್ಯರ ಪರೇಡ್ ನಡೆಸಲು ತೀರ್ವನಿಸಲಾಗಿತ್ತು. ಆದರೆ, ಅಲ್ಲಿಗೆ ಕೇವಲ 5 ಸದಸ್ಯರು ಹೋಗಿದ್ದರು. ಹೀಗಾಗಿ, ಕೆಪಿಸಿಸಿಯವರು ಜಿಲ್ಲೆಯಲ್ಲಿಯೇ ಸಮಸ್ಯೆ ಪರಿಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಆಸ್ಪದ ನೀಡಬೇಡಿ ಎಂಬ ಸೂಚನೆಯನ್ನು ಜಿಲ್ಲೆಯ ನಾಯಕರಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 5ಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲ ಸದಸ್ಯರ ಸಭೆ ಕರೆದಿದ್ದರು. ಈ ಸಭೆಗೂ ಕೆಲವರು ಗೈರು ಹಾಜರಾದರು. ಏಕನಾಥ ಬಾನುವಳ್ಳಿ ಪರ ಪಕ್ಷದ ನಾಯಕರಲ್ಲಿ ಹೆಚ್ಚಿನವರು ಒಲವು ತೋರಿದ್ದು, ಅಧ್ಯಕ್ಷ ಸ್ಥಾನ ಅವರಿಗೇ ಒಲಿಯುವುದು ನಿಶ್ಚಿತ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿಬರುತ್ತಿವೆ.

    ರಾಣೆಬೆನ್ನೂರಗೆ ಅವಕಾಶ

    ಜಿಪಂನ 5 ವರ್ಷದ ಅವಧಿಯಲ್ಲಿ ಈವರೆಗೆ ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲೂಕಿನ ಒಬ್ಬರಿಗೂ ಅಧ್ಯಕ್ಷ ಸ್ಥಾನ ಲಭಿಸಿಲ್ಲ. ಕಾಕೋಳ ಕ್ಷೇತ್ರದ ಸದಸ್ಯ ಏಕನಾಥ ಬಾನುವಳ್ಳಿ ಅವರು ರಾಣೆಬೆನ್ನೂರ ತಾಲೂಕಿನ ಕ್ಷೇತ್ರದವರಾದರೂ ಅವರು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿ ಬಹುತೇಕ ಬ್ಯಾಡಗಿ ವಿಧಾನಸಭೆ ಕ್ಷೇತ್ರಕ್ಕೂ ಸೇರಿದೆ. ಹೀಗಾಗಿ, ಅವರಿಗೆ ಅವಕಾಶ ಕಲ್ಪಿಸಿದರೆ ಎರಡೂ ತಾಲೂಕಿಗೆ ನ್ಯಾಯ ಒದಗಿಸಿದಂತಾಗುವುದು ಎಂಬ ಅಭಿಪ್ರಾಯ ಕೆಲವರದ್ದು.

    ಇನ್ನು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತವಾಗಿರುವ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಅವರ ಪುತ್ರ ರಾಘವೇಂದ್ರ ತಹಸೀಲ್ದಾರ್ ಅವರಿಗೆ ಮುಂದಿನ ಅವಧಿಯಲ್ಲಿ ಅವಕಾಶ ಕಲ್ಪಿಸುವುದಾಗಿ ಬಸನಗೌಡ ದೇಸಾಯಿ ಅಧ್ಯಕ್ಷರಾಗುವ ಸಮಯದಲ್ಲಿ ವರಿಷ್ಠರು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ತಮ್ಮ ಪುತ್ರನಿಗೆ ಅವಕಾಶ ಕಲ್ಪಿಸುವಂತೆ ಮನೋಹರ ತಹಸೀಲ್ದಾರ್ ಪಟ್ಟು ಹಿಡಿದಿದ್ದಾರೆ. ಇವರಿಗೆ ಕೆಲ ಸದಸ್ಯರು ಬೆಂಬಲವಾಗಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಸದಸ್ಯರು ತಟಸ್ಥರಾಗಿದ್ದು, ಹೈಕಮಾಂಡ್​ನ ನಿರ್ಣಯ ನೋಡಿಕೊಂಡು ಮುಂದಿನ ತೀರ್ಮಾನ ಹೇಳುತ್ತೇವೆ ಎಂದು ಯಾರ ಕೈಗೂ ಸಿಗದೇ ಆಟವಾಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಿಜೆಪಿ ನಿಲುವು ತಟಸ್ಥ: ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಹೆಚ್ಚಾದರೆ ಅದನ್ನು ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಕಾಂಗ್ರೆಸ್ ಕೈಗೆ ಸಿಗದ ಗುಂಪು ಬಿಜೆಪಿ ಸದಸ್ಯರೊಂದಿಗೆ ಚರ್ಚೆಯಲ್ಲಿದ್ದು, ಕೊನೆ ಕ್ಷಣದಲ್ಲಿ ಬಿಜೆಪಿಯ ಎಲ್ಲ ಸದಸ್ಯರು ಒಮ್ಮತದಿಂದ ಬೆಂಬಲ ನೀಡಿದರೆ ಬಂಡಾಯವೇಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿಯ ಎಲ್ಲ ಸದಸ್ಯರು ಕೈ ಬಂಡಾಯ ಸದಸ್ಯರೊಂದಿಗೆ ಕೈಜೋಡಿಸಲು ಸದ್ಯಕ್ಕೆ ಸಿದ್ಧರಿಲ್ಲ. ಹೀಗಾಗಿ, ಕಾಂಗ್ರೆಸ್​ನ ಹಾದಿ ಸ್ವಲ್ಪ ಮಟ್ಟಿಗೆ ಸುಗಮವಾಗಿಯೇ ಕಾಣುತ್ತಿದೆ.

    ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಎಲ್ಲ ಸದಸ್ಯರೊಂದಿಗೆ ರ್ಚಚಿಸಿದ್ದು ಬೆಂಬಲ ಸೂಚಿಸಿದ್ದಾರೆ. ಬ್ಯಾಡಗಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಹುಪಾಲು ಹಳ್ಳಿಗಳು ನನ್ನ ಕ್ಷೇತ್ರದಲ್ಲಿದ್ದು, ತಾಲೂಕು ರಾಣೆಬೆನ್ನೂರಾದರೂ ವಿಧಾನಸಭೆ ಕ್ಷೇತ್ರ ಬ್ಯಾಡಗಿಯಾಗಿದೆ. ಬ್ಯಾಡಗಿ ಕ್ಷೇತ್ರಕ್ಕೆ ಜಿಪಂನಲ್ಲಿ ಅವಕಾಶ ಲಭ್ಯವಾಗಿಲ್ಲ. ಈ ಸಾರಿಯಾದರೂ ಅವಕಾಶ ಕಲ್ಪಿಸಲು ಹೈಕಮಾಂಡ್​ಗೆ ವಿನಂತಿಸಿದ್ದೇನೆ.
    | ಏಕನಾಥ ಬಾನುವಳ್ಳಿ, ಜಿಪಂ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts