More

    ಜಿಪಂ ಅಧ್ಯಕ್ಷೆ ವಿರುದ್ಧ ರೇವಣ್ಣ ವಾಗ್ವಾದ

    ಗೊಂದಲದ ಗೂಡಾದ ಸಾಮಾನ್ಯ ಸಭೆ, ಆರೋಪ, ಪ್ರತ್ಯಾರೋಪದ ಸದ್ದು

    ಹಾಸನ: ಆರೋಪ, ಪ್ರತ್ಯಾರೋಪ, ಏಕ ವಚನ ಪ್ರಯೋಗ, ಕ್ಷಮೆ ಕೇಳಲು ಪಟ್ಟು, ಏರುಧ್ವನಿಯ ಕೂಗಾಟ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಣ್ಣೀರು, ಪರಸ್ಪರ ಕ್ಷಮೆ ಕೇಳುವುದರೊಂದಿಗೆ ಇತಿಶ್ರೀ…
    ಶನಿವಾರ ಆಯೋಜನೆಗೊಂಡಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ನಡುವಿನ ವಾಗ್ಯುದ್ಧದಿಂದ ಇಡೀ ಸಭೆ ಗೊಂದಲದ ಗೂಡಾಯಿತು.
    ಕೋವಿಡ್-19 ಕುರಿತು ಮೇ 26ರಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಕರೆದಿದ್ದ ವಿಶೇಷ ಸಭೆಗೆ ಜೆಡಿಎಸ್ ಸದಸ್ಯರು ಹಾಜರಾಗಿರಲಿಲ್ಲ ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ್ದ ಶ್ವೇತಾ ದೇವರಾಜ್, ನಾನು ದಲಿತ ಮಹಿಳೆಯಾದ್ದರಿಂದ ಎಚ್.ಡಿ.ರೇವಣ್ಣ ಅಭಿವೃದ್ಧಿಗೆ ಅಡ್ಡಗಾಲಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಶನಿವಾರ ನಡೆದ ಸಭೆಯಲ್ಲಿ ಅದೇ ವಿಚಾರ ಸುದೀರ್ಘ ಚರ್ಚೆಯಾಗಿ ನಂತರ ಇಬ್ಬರೂ ಪರಸ್ಪರ ಕ್ಷಮೆ ಕೇಳುವಂತಾಯಿತು. ಇದರ ನಡುವೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ನಡುವೆ ಮಾತಿನ ಸಮರವೇ ನಡೆಯಿತು.
    ಪುಟಗೋಸಿ ಪದ ಬಳಸಿ ಕ್ಷಮೆ ಕೇಳಿದ ರೇವಣ್ಣ: 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿದ್ದ 6.20 ಕೋಟಿ ರೂ. ಜೆಡಿಎಸ್‌ನ ಪ್ರತಿಷ್ಠೆಯಿಂದ ವಾಪಸ್ಸಾಗುತ್ತಿದೆ. ತಾನು ದಲಿತ ಮಹಿಳೆ ಎಂಬ ಕಾರಣಕ್ಕೆ ರೇವಣ್ಣ ದ್ವೇಷ ಸಾಧಿಸುತ್ತಿದ್ದಾರೆಂದು ಹೇಳಿದ್ದೀರಿ. ಈ ಮೂಲಕ ಹಾಸನದ ಮರ್ಯಾದೆ ಕಳೆದಿದ್ದೀರಿ. ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಎಚ್.ಡಿ.ರೇವಣ್ಣ ಆಗ್ರಹಿಸಿದರು. ಕ್ಷಮೆ ಯಾಚಿಸದಿದ್ದರೆ ಖಂಡನಾ ನಿರ್ಣಯ ಅಂಗೀಕರಿಸಬೇಕಾಗುತ್ತದೆ. ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಸಬೇಕು, ಇಲ್ಲವಾದರೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಶ್ವೇತಾ ದೇವರಾಜ್, ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಕ್ಷಮೆಯನ್ನೂ ಕೇಳುವುದಿಲ್ಲ ಎಂದರು. ಆಗ ಜೆಡಿಎಸ್‌ನ ಸದಸ್ಯರು ಎಚ್.ಡಿ.ರೇವಣ್ಣ ಮಾತಿಗೆ ಬೆಂಬಲವಾಗಿ ನಿಂತು ಏರುಧ್ವನಿಯಲ್ಲಿ ಕ್ಷಮೆಗೆ ಆಗ್ರಹಿಸಿದರು. ಇದರಿಂದ ಸಭೆ ಗೊಂದಲದ ಗೂಡಾಯಿತು. ಕಾಂಗ್ರೆಸ್ ಸದಸ್ಯ ಪಟೇಲ್ ಶಿವಪ್ಪ ಮಧ್ಯಪ್ರವೇಶಿಸಿ ಜಿಪಂ ಅಧ್ಯಕ್ಷರು ಕ್ಷಮೆ ಯಾಚಿಸುವುದು ಒಳಿತು ಎಂದು ಸಲಹೆ ನೀಡಿದರು. ತಮ್ಮ ಪಕ್ಷದ ಹಿರಿಯ ಸದಸ್ಯರಿಂದ ಬೆಂಬಲದ ನಿರೀಕ್ಷೆಯಲ್ಲಿದ್ದ ಶ್ವೇತಾ ದೇವರಾಜ್, ಇದರಿಂದ ಅಸಮಾಧಾನಗೊಂಡರಲ್ಲದೆ, ನೀವು ಸುಮ್ಮನೆ ಕೂತುಕೊಳ್ಳಿ ಎಂದರು.
    ಆಗ ಅಧ್ಯಕ್ಷೆ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸದಸ್ಯ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ಮಾತಿನ ಭರದಲ್ಲಿ ಜಿಲ್ಲಾ ಪಂಚಾಯಿತಿಯ ಪುಟಗೋಸಿ ಅನುದಾನಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದನ್ನೇ ಪ್ರತ್ಯಸ್ತ್ರವಾಗಿ ಬಳಕೆ ಮಾಡಿದರು. ಜಿಲ್ಲಾ ಪಂಚಾಯಿತಿಯನ್ನು ಪುಟಗೋಸಿಗೆ ಹೋಲಿಸಿದ ಶಾಸಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಆರಂಭದಲ್ಲಿ ತಾವು ಆ ಪದ ಬಳಸಿಲ್ಲ ಎಂದ ರೇವಣ್ಣ ಅವರಿಗೆ ಪತ್ನಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ನೀವು ಆ ಪದ ಬಳಸಿದ್ದೀರಿ, ಆದ್ದರಿಂದ ಕ್ಷಮೆ ಕೇಳಿ ಎಂದು ಸಲಹೆ ನೀಡಿದರು. ಅದರಂತೆ ಎಚ್.ಡಿ.ರೇವಣ್ಣ ಕ್ಷಮೆಯಾಚಿಸಿದರು.
    ನಂತರ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಇತರ ಸದಸ್ಯರ ಸಲಹೆಯಂತೆ ಶ್ವೇತಾ ದೇವರಾಜ್ ಸಹ ಕ್ಷಮೆ ಕೇಳಿದರು.
    ಕಣ್ಣೀರಿಟ್ಟ ಶ್ವೇತಾ: ತಮ್ಮದೇ ಪಕ್ಷದ ಸದಸ್ಯರು ಹಾಗೂ ಎಂಎಲ್ಸಿ ಸಲಹೆಯಂತೆ ಕ್ಷಮೆ ಕೋರಿದರೂ ಮಾನಸಿಕವಾಗಿ ಘಾಸಿಯಾಗದಂತೆ ಕಂಡ ಶ್ವೇತಾ ದೇವರಾಜ್, ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಇಷ್ಟೆಲ್ಲ ವಿರೋಧ ಮಾಡುತ್ತಿದ್ದಾರೆ ಎಂದು ವೇದಿಕೆಯಲ್ಲಿಯೇ ಕಣ್ಣೀರು ಹಾಕಿದರು. ಅವರ ಪಕ್ಷದ ಯಾರೊಬ್ಬರೂ ಆ ವೇಳೆ ಅವರನ್ನು ಸಮಾಧಾನಪಡಿಸಲು ಯತ್ನಿಸದೆ ಮಧ್ಯಾಹ್ನದ ಭೋಜನ ಸ್ವೀಕರಿಸಲು ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts