More

    ಜಿಟಿಜಿಟಿ ಮಳೆಗೆ ಕೆಸರಿನಂತಾದ ಮುಖ್ಯರಸ್ತೆಗಳು

    ಹಳೇಬೀಡು: ಎರಡು ದಿನದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಪಟ್ಟಣದ ಮುಖ್ಯರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಹಾಸನ-ಹಳೇ ಬೀಡು ಹೆದ್ದಾರಿಯಲ್ಲಿನ ಪ್ರಯಾಣ ಪ್ರವಾಸಿಗರಿಗೆ ಸಂಕಷ್ಟ ತಂದೊಡ್ಡಿದೆ.

    ಹಗರೆ ಮಾರ್ಗವಾಗಿ ಹಳೇಬೀಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಪುಷ್ಪಗಿರಿ ಕ್ಷೇತ್ರದಿಂದ ಐತಿಹಾಸಿಕ ಹೊಯ್ಸಳೇಶ್ವರ ದೇಗುಲದವರೆಗೆ 4 ಕಿ.ಮೀ. ಸಂಪೂರ್ಣ ಹದಗೆಟ್ಟಿದ್ದು, ಹೆಜ್ಜೆ ಹೆಜ್ಜೆಗೂ ನಿರ್ಮಾಣವಾಗಿರುವ ಗುಂಡಿಗಳು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ.

    ವಿವಿಧಡೆಯಿಂದ ಹಳೇಬೀಡಿನ ಐತಿಹಾಸಿಕ ತಾಣಗಳನ್ನು ನೋಡಲು ಬರುವ ಪ್ರವಾಸಿಗರು ಪ್ರಮುಖವಾಗಿ ಹಾಸನ -ಹಗರೆ -ಹಳೇಬೀಡು ಹೆದ್ದಾರಿಯನ್ನೇ ಬಳಸುತ್ತಾರೆ. ಆದರೆ, ಪುಷ್ಪಗಿರಿ ಬೆಟ್ಟದ ತಪ್ಪಲಿನಿಂದ ಹಳೇಬೀಡಿನ ತನಕ ರಸ್ತೆಯನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ ಅಗೆಯಲಾಗಿದ್ದು ಜಲ್ಲಿ ಹಾಕಿ ಕೈ ಬಿಡಲಾಗಿದೆ. ಬೃಹತ್ ವಾಹನಗಳು ಇದೇ ದಾರಿಯಲ್ಲಿ ಸಂಚರಿಸುವುದರಿಂದ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯ ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.

    ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತ ಸಾಗಿರುವುದು ಮತ್ತು ಸದ್ಯ ಸುರಿಯುತ್ತಿರುವ ಮಳೆಯಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಬಸ್ತಿಹಳ್ಳಿ ಜೈನ ದೇಗುಲ, ಹುಲಿಕೆರೆ ಗ್ರಾಮದ ಕಲ್ಯಾಣಿಯನ್ನು ವೀಕ್ಷಿಸಲು ತೆರಳುವ ಪ್ರವಾಸಿಗರು ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಅಪಾಯಕಾರಿ ಮುಖ್ಯರಸ್ತೆ: ನಿತ್ಯ ಸಾವಿರಾರು ಜನರು ಸಂಚರಿಸುವ ಪಟ್ಟಣದ ಮುಖ್ಯರಸ್ತೆ ಹಲವು ವರ್ಷಗಳಿಂದ ಸುಧಾರಣೆಯನ್ನೇ ಕಾಣದೆ ಕೇವಲ ಗುಂಡಿ ಗಳಿಂದಲೇ ಕೂಡಿದೆ. ಜಾವಗಲ್ ಹಾಗೂ ಬೇಲೂರು ಪಟ್ಟಣಕ್ಕೆ ತೆರಳುವ ವಾಹನಗಳು ಕರಿಯಮ್ಮ ಮಹಾದ್ವಾರದ ಬಳಿ ಬಸವೇಶ್ವರ ವೃತ್ತದಲ್ಲಿ ಜೊತೆಯಾಗುತ್ತವೆ. ಸರಿಯಾದ ಟ್ರಾಫಿಕ್ ನಿರ್ವಹಣೆ ಇಲ್ಲದ ಕಾರಣ ಮತ್ತು ರಸ್ತೆ ಅದ್ವಾನದಿಂದ ನಿತ್ಯ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನನುಕೂಲವನ್ನು ತಪ್ಪಿಸಿ ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ಜನರ ಆಗ್ರಹವಾಗಿದೆ.

    ಹಳೇಬೀಡಿನ ಹೊಯ್ಸಳ ವೃತ್ತದಿಂದ ಪುಷ್ಪಗಿರಿ ಬೆಟ್ಟದ ತಪ್ಪಲುವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಅಲ್ಲಲ್ಲಿ ಅಗೆದು ಜಲ್ಲಿ ಹಾಕಿ ಸಮತಟ್ಟು ಮಾಡಲಾಗಿದೆ. ಹಳ್ಳ ಹರಿಯುವ ಸ್ಥಳಗಳಲ್ಲಿ ಸೇತುವೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದು ಮುಗಿದ ತಕ್ಷಣವೇ ಡಾಂಬರ್ ಹಾಕುವ ಕೆಲಸ ಆರಂಭಿಸಲಾಗುವುದು.
    ಪುಟ್ಟಸ್ವಾಮಿ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ. ಬೇಲೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts