More

    ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ

    ಕಾರವಾರ: ಗೋವಾದಲ್ಲಿ ಕರೊನಾ ಸೋಂಕು ಕಂಡುಬಂದಿರುವ ಜೊಯಿಡಾ ಅಣಶಿ ಮೂಲದ ಯುವಕನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಗೋವಾದ ಔಷಧ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ 23 ವರ್ಷದ ಯುವಕ ಮೇ 14ರಂದು ಕಾರವಾರ ಮಾಜಾಳಿ ಚೆಕ್​ಪೋಸ್ಟ್ ಮೂಲಕ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳಿದ್ದ. ವಾಸ್ಕೋದಲ್ಲಿ ಆತನನ್ನು ಕ್ವಾರಂಟೈನ್ ಮಾಡಿಸಿ, ಆತನದ್ದೇ ಖರ್ಚಿನಲ್ಲಿ ಖಾಸಗಿ ಪ್ರಯೋಗಾಲಯದಲ್ಲಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

    ತನಗೆ ಕರೊನಾ ಲಕ್ಷಣ ಇರುವ ಬಗ್ಗೆ ಯುವಕ ಅನುಮಾನ ವ್ಯಕ್ತಪಡಿಸಿದ್ದು, ಗೋವಾ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಗಂಟಲ ದ್ರವದ ಮಾದರಿ ಮರು ಪರೀಕ್ಷೆಗೆ ಕಳಿಸಲಾಗಿದ್ದು, ನೆಗೆಟಿವ್ ಬರಲಿದೆ ಎಂದು ಆತ ವಿಶ್ವಾಸ ವ್ಯಕ್ತಪಡಿಸಿದ್ದಾನೆ ಎಂದು ಡಾ.ಹರೀಶ ಕುಮಾರ ತಿಳಿಸಿದ್ದಾರೆ.

    ಸಂಜೆ 6ರವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ
    ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಾಲ್ಕನೇ ಹಂತದ ಲಾಕ್​ಡೌನ್ ಅನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುವುದು. ಹೊರ ಜಿಲ್ಲೆಗೆ ಹೋಗುವ ಹಾಗೂ ಹೊರ ಜಿಲ್ಲೆಯಿಂದ ಬರುವ ವ್ಯಕ್ತಿ ಹಾಗೂ ವಾಹನಗಳಿಗೆ ಯಾವುದೇ ಪರವಾನಗಿ ಬೇಕಿಲ್ಲ. ಆದರೆ, ಹೊರ ರಾಜ್ಯದಿಂದ ಬರಲು ಮತ್ತು ಹೋಗಲು ಪರವಾನಗಿ ಬೇಕು. ಇನ್ನು, ಬೆಳಗ್ಗೆ 7 ರಿಂದ ಸಾಯಂಕಾಲ 6 ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಮದುವೆ ಸಮಾರಂಭಗಳಿಗೆ 50 ಜನರು ಮಿತಿಯಲ್ಲಿ ನಡೆಸಲು ಸ್ಥಳೀಯ ಆಡಳಿತದಿಂದ ಅನುಮತಿ ನೀಡಲಾಗುವುದು. ಜನ ಹೆಚ್ಚು ಸೇರಿ ನಿಯಮ ಮೀರಿದಲ್ಲಿ ತಕ್ಷಣ ಕಾರ್ಯಕ್ರಮ ಬಂದ್ ಮಾಡಿಸುವ ಅಧಿಕಾರವನ್ನು ಅಧಿಕಾರಿಗಳು ಹೊಂದಿದ್ದಾರೆ. 10 ವರ್ಷದ ಒಳಗಿನ ಮಕ್ಕಳು, 60 ವರ್ಷದ ಮೇಲಿನ ವೃದ್ಧರು, ಗರ್ಭಿಣಿ, ಆರೋಗ್ಯ ಸಮಸ್ಯೆ ಇರುವವರು ಅನಗತ್ಯ ಓಡಾಡದಂತೆ ಸ್ವತಃ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ತಿಳಿಸಿದ್ದಾರೆ.

    ಮಾಹಿತಿ ತಪ್ಪು ನೀಡಿದರೆ ಪ್ರಕರಣ: ಹೊರ ರಾಜ್ಯಗಳಿಂದ ಬಂದು ತಪ್ಪು ಮಾಹಿತಿ ನೀಡುವ ಎಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಎಚ್ಚರಿಸಿದ್ದಾರೆ. ಪ್ರಜ್ಞಾವಂತರು ಕಡಲ ತೀರದಲ್ಲಿ ಓಡಾಡುವುದು ಕಂಡುಬರುತ್ತಿದ್ದು ಅವರ ಮೇಲೂ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲೆಯ ವಿವಿಧೆಡೆ ಚಿಕಿತ್ಸೆ: ಶಿರಸಿ, ಹಳಿಯಾಳ, ಭಟ್ಕಳ, ಹೊನ್ನಾವರ ಹಾಗೂ ಕುಮಟಾದಲ್ಲಿ ಕರೊನಾ ವಾರ್ಡ್ ಸಿದ್ಧವಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ಕರೊನಾ ರೋಗಿಗಳಿಗೆ ಅವರ ಊರಿನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು. ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಮಾತ್ರ ಕಾರವಾರಕ್ಕೆ ಕರೆತರಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಹೊರ ರಾಜ್ಯದಿಂದ ಇನ್ನೂ ಬರಬೇಕಿದೆ ಮೂರೂವರೆ ಸಾವಿರ ಜನ
    ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿ ಕೆಲವು ಕರೊನಾ ಹಾಟ್​ಸ್ಟಾಟ್ ರಾಜ್ಯಗಳಿಂದ ರೋಗಿಗಳು ಬರುವುದನ್ನು ರಾಜ್ಯ ನಿಷೇಧಿಸಿದೆ. ಆದರೆ, ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬರಲು 6,435 ಜನ ಅನುಮೋದನೆ ಪಡೆದಿದ್ದಾರೆ. 3,924 ಜನರು ಮಹಾರಾಷ್ಟ್ರದಿಂದ ಬರುವವರಿದ್ದಾರೆ. ಇವರಲ್ಲಿ ಇದುವರೆಗೆ ಮೂರೂವರೆ ಸಾವಿರ ಜನ ಮಾತ್ರ ಜಿಲ್ಲೆಗೆ ಬಂದಿದ್ದು, ಉಳಿದವರಿಗೆ ಜಿಲ್ಲೆಗೆ ಬರಲು ನಾವು ಮುಂದಿನ ದಿನದಲ್ಲಿ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅವರನ್ನು ಕ್ವಾರಂಟೈನ್​ಗೆ ಒಳಪಡಿಸುವ ಎಲ್ಲ ತಯಾರಿ ನಡೆಸಿದ್ದೇವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts