More

    ಜಾತ್ರೆ ಮೇಲೆ ಕರೊನಾ ಕರಿನೆರಳು

    ಶಂಕರ ಶರ್ಮಾ ಕುಮಟಾ

    ಸಂಕ್ರಾಂತಿ ಹಬ್ಬದ ಬಳಿಕ ಎಲ್ಲೆಡೆ ತೇರು, ಜಾತ್ರೆ, ಬಂಡಿಹಬ್ಬ, ವಾರ್ಷಿಕ ಉತ್ಸವಗಳು ಸಾಲುಸಾಲಾಗಿ ಜರುಗುತ್ತಿವೆ. ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಬಹಳಷ್ಟು ತೇರು, ಜಾತ್ರೆಗಳಲ್ಲಿ ಅಂಗಡಿ ಗಳನ್ನು ಹಾಕುವುದಕ್ಕೆ ಸರ್ಕಾರ ಅವಕಾಶ ನೀಡದಿರುವುದು ಬೇಸರಕ್ಕೆ ಕಾರಣವಾಗಿದೆ.

    ಈಗಾಗಲೇ ಕರೊನಾ ಲಾಕ್​ಡೌನ್ ಬಹುಪಾಲು ತೆರವಾಗಿದೆ. ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭಗಳಲ್ಲಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಒತ್ತು ಕೊಟ್ಟು, ಉಳಿದಂತೆ ನಿಯ ಮಾವಳಿಯಲ್ಲಿ ಸರ್ಕಾರ ಸಾಕಷ್ಟು ಸಡಿಲಿಕೆ ಮಾಡಿದೆ. ಜನಜೀವನ ಬಹುತೇಕ ಸಹಜ ಸ್ಥಿತಿಯಲ್ಲಿದ್ದು, ಹಬ್ಬ- ಹರಿದಿನಗಳನ್ನು ಜನರು ಎಂದಿನ ಸಂಭ್ರಮದಲ್ಲಿ ಆಚರಿಸ ತೊಡಗಿದ್ದಾರೆ. ತಾಲೂಕಿನಲ್ಲಿ ಧಾರೇಶ್ವರ, ಕುಮಟಾ, ಹೆಗಡೆ, ಬಾಡ, ಬ್ರಹ್ಮೂರು, ಗೋರೆ, ಗೋಕರ್ಣದಲ್ಲಿ ನಡೆಯುವ ವಾರ್ಷಿಕ ರಥೋತ್ಸವಗಳು, ಹಲವೆಡೆ ನಡೆಯುವ ಬಂಡಿಹಬ್ಬ ವಾರ್ಷಿಕ ಉತ್ಸವಗಳು ವಿಶೇಷ ಮಹತ್ವ ಹೊಂದಿವೆ. ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮಗಳಲ್ಲಿ ಹೊರದೇಶದಲ್ಲಿದ್ದವರೂ ಬಂದು ಸೇರಿ ಕೊಳ್ಳುತ್ತಾರೆ. ಅಲ್ಲಿನ ಪಾರಂಪರಿಕ ಆಚರಣೆ ಗಳಿಗೆ ಜಾತ್ರೆ ಪೇಟೆಯ ರಂಗು ವಿಶೇಷ ಮೆರುಗು ನೀಡುತ್ತದೆ. ಇದೇ ತಿಂಗಳಲ್ಲಿ ನಡೆ ಯುವ ಪ್ರಸಿದ್ಧ ಹೆಗಡೆ ತೇರು, ಕುಮಟಾ ತೇರು, ಬಾಡ ತೇರು ಮುಂತಾದೆಡೆ ಕರೊನಾ ಸೋಂಕು ತಡೆ ನಿಯಮಾವಳಿ ಪಾಲನೆಗೆ ಹೆಚ್ಚು ಒತ್ತು ನೀಡಲಾಗಿದೆ.

    ಫೆ. 8ರಂದು ಹೆಗಡೆಯಲ್ಲಿ ನಡೆಯುವ ತೇರಿನ ಸಂದರ್ಭದಲ್ಲಿ ಊರಿನಲ್ಲಿ ಈಗಾಗಲೇ ಇರುವ ಅಂಗಡಿ ವ್ಯಾಪಾರ ಹೊರತುಪಡಿಸಿ ಪ್ರತ್ಯೇಕ ಜಾತ್ರೆ ಪೇಟೆಗೆ ಅವಕಾಶವಿಲ್ಲ. ಉಳಿದಂತೆ ದೇವಾಲಯದಲ್ಲಿ ಭಕ್ತರಿಗೆ ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಿನ ಪಾಲನೆಯ ಜೊತೆಗೆ ವರ್ಷದಂತೆ ಎಲ್ಲ ಬಗೆಯ ಸೇವೆಗಳಿಗೆ ಅವಕಾಶ ನೀಡ ಲಾಗಿದೆ. ಕುಮಟಾ ತೇರಿನಲ್ಲೂ ಹಲವು ನಿಬಂಧನೆಗಳನ್ನು ಅಳವಡಿಸಲಾಗಿದ್ದು, ಅದರ ಪರಿಣಾಮ ಜಾತ್ರೆ ಪೇಟೆಯ ಮೇಲೆ ಬೀಳಲಿದೆ. ಜಾತ್ರೆ ಬೀದಿಯಲ್ಲಿ ಮಿಠಾಯಿ, ಆಟಿಕೆಗಳು, ಬಳೆ ಅಂಗಡಿ ಮುಂತಾದ ಅಂಗಡಿಕಾರರ ಬೇಸರಕ್ಕೆ ಕಾರಣವಾಗಿದೆ. ಬಹಳಷ್ಟು ಜಾತ್ರೆಯ ವ್ಯಾಪಾರಿಗಳು ವರ್ಷಕ್ಕೊಮ್ಮೆ ಬರುವ ಜಾತ್ರೆ ಹಾಗೂ ಬಂಡಿ ಹಬ್ಬವನ್ನೇ ನಂಬಿಕೊಂಡಿರುತ್ತಾರೆ. ಕಳೆದ ವರ್ಷ ಕರೊನಾ ಲಾಕ್​ಡೌನ್ ಕಾರಣಕ್ಕೆ ಬಹಳಷ್ಟು ಜಾತ್ರೆ, ಹಬ್ಬಗಳು ರದ್ದಾಗಿದ್ದವು. ಈ ಬಾರಿ ನಡೆಯುತ್ತಿವೆಯಾದರೂ ಹೆಚ್ಚಿನ ಜಾತ್ರೆ ವ್ಯಾಪಾರಿಗಳಿಗೆ ಅವಕಾಶ ನೀಡದೆ ಇರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ನಾವು ಹಲವು ವರ್ಷಗಳಿಂದ ಜಾತ್ರೆ, ತೇರು, ಬಂಡಿ ಹಬ್ಬ ಮುಂತಾದವುಗಳಲ್ಲಿ ಆಟಿಕೆ ಸಾಮಗ್ರಿಗಳ ವ್ಯಾಪಾರ ಮಾಡುತ್ತಿದ್ದೆವು. ಈ ಬಾರಿ ಹೆಗಡೆ, ಕುಮಟಾ ಮುಂತಾದ ಕಡೆಗಳಲ್ಲಿ ಜಾತ್ರೆಗೆ ನಮಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ದೇವಸ್ಥಾನ ಆಡಳಿತದವರು ಹೇಳುತ್ತಿದ್ದಾರೆ. ಜಾತ್ರೆ ನಡೆಯುತ್ತದೆ, ಜನ ಎಷ್ಟಾದರೂ ಸೇರಬಹುದು. ಆದರೆ, ಅಂಗಡಿಗಳಿಗೆ ಮಾತ್ರ ಅವಕಾಶವಿಲ್ಲ ಎಂದರೆ ಸರಿಯೇ?
    | ಗಣಪತಿ ಹಂದಿಗೋಣ ಆಟಿಕೆ ವ್ಯಾಪಾರಿ

    ಜಾತ್ರೆಗೆ ಬರುವವರು ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲಿಸಬೇಕು. ದೇವಾಲಯದ ಆವಾರದಲ್ಲಿ ಹಾಗೂ ರಥಬೀದಿಯಲ್ಲಿ ಯಾವುದೆ ಜಾತ್ರಾ ಅಂಗಡಿಗಳಿಗೆ ಅವಕಾಶ ಇರುವುದಿಲ್ಲ. ದೇವರಿಗೆ ಸಲ್ಲಿಸುವ ಹೂವು, ಹಣ್ಣು ತೆಂಗಿನಕಾಯಿ ಪೂಜಾ ಸಾಮಗ್ರಿಗಾಗಿ ದೇವಾಲಯದ ಎದುರು ವ್ಯವಸ್ಥೆ ಮಾಡಲಾಗುವುದು. ದೇವಿಗೆ ಎಲ್ಲ ಬಗೆಯ ಸೇವೆಗೆ ಭಕ್ತಾದಿಗಳಿಗೆ ಅವಕಾಶವಿದೆ.
    | ನಾಗೇಶ ಶಾನಭಾಗ, ಮೊಕ್ತೇಸರ ಹೆಗಡೆ ಶಾಂತಿಕಾಂಬಾ ದೇವಿ ದೇವಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts