More

    ಜಾಗೃತಿ ನಡುವೆಯೂ ಸಾಕ್ಷರತೆ ಹಿನ್ನಡೆ; ಜಿಲ್ಲೆಯಲ್ಲಿದ್ದಾರೆ 2,06,635 ಅನಕ್ಷರಸ್ಥರು, ಗ್ರಾಮೀಣ ಭಾಗದಲ್ಲೇ ಹೆಚ್ಚು

    ಚಿಕ್ಕಬಳ್ಳಾಪುರ: ಜಾಗೃತಿ ಕಾರ್ಯಕ್ರಮಗಳು, ಯೋಜನೆಗಳ ನಡುವೆಯೂ ಜಿಲ್ಲೆಯಲ್ಲಿ 2,06,635 ಅನಕ್ಷರಸ್ಥರಿದ್ದು ಪೂರ್ಣ ಪ್ರಮಾಣದ ಸಾಕ್ಷರತೆ ಗುರಿ ಸಾಧನೆಗೆ ಹಿನ್ನಡೆಯಾದಂತಾಗಿದೆ.

    ನಗರ ಪ್ರದೇಶಗಳಿಗೆ ಹೋಲಿಸಿದರೆ ಹಳ್ಳಿಯಲ್ಲಿಯೇ ಅನಕ್ಷರತೆ ಹೆಚ್ಚಿದ್ದು, ಗ್ರಾಮೀಣ ಭಾಗದಲ್ಲಿ 1,46,949 ಮತ್ತು ನಗರದಲ್ಲಿ 59,686 ಅನಕ್ಷರಸ್ಥರಿದ್ದಾರೆ ಎಂದು ಸಾಕ್ಷರತೆ ಇಲಾಖೆ ಮಾಹಿತಿ ನೀಡಿದೆ.

    ಹಿಂದುಳಿದ ಹಾಗೂ ಸತತ ಬರಗಾಲ ಪೀಡಿತ ಹಣೆಪಟ್ಟಿ ಹೊಂದಿರುವ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಈ ಮೊದಲು ಶೇ.60ರಿಂದ 65ರಷ್ಟಿತ್ತು, ಜಾಗೃತಿ ಕಾರ್ಯಕ್ರಮಗಳು, ಹಲವು ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಈ ಪ್ರಮಾಣ ಈಗ ಶೇ.70ರಷ್ಟಿದೆ. 2011ರ ಜನಗಣತಿ ಅನ್ವಯ 3,46,583 ಅನಕ್ಷರಸ್ಥರಿದ್ದು, ಈ ಪೈಕಿ 1,85,456 ಮಂದಿಯನ್ನು ಅಕ್ಷರಸ್ಥರನ್ನಾಗಿಸಲಾಗಿದೆ.

    ಮತ್ತೊಂದೆಡೆ ಸಾಕ್ಷರತೆ ಇಲಾಖೆ ನೀಡುತ್ತಿರುವ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರಿದ್ದಾರೆ ಎನ್ನುವ ತಜ್ಞರ ಮಾತುಗಳು ಗೊಂದಲ ಹುಟ್ಟುಹಾಕಿರುವ ಜತೆಗೆ ಅಕ್ಷರ ಜ್ಞಾನ ನೀಡಲು ಕೈಗೊಂಡಿರುವ ಕಾರ್ಯಕ್ರಮಗಳು, ಯೋಜನೆಗಳ ಜಾರಿಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

    ಅಕ್ಷರ ಕಲಿಕೆ ಹೆಚ್ಚಳ: ಸರ್ಕಾರದ ವಿವಿಧ ಕಾರ್ಯಕ್ರಮಗಳು, ಉಚಿತ ಶಿಕ್ಷಣ ಸೌಲಭ್ಯದ ಹಿನ್ನೆಲೆಯಲ್ಲಿ ಬಹುತೇಕ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದರ ನಡುವೆ ಶಿಕ್ಷಣದಿಂದ ವಂಚಿತರಾದವರನ್ನು ಪತ್ತೆ ಹಚ್ಚಿ, ಮರಳಿ ಶಾಲೆಗೆ ಕರೆ ತರಲಾಗುತ್ತಿದೆ. ಬಡತನ, ಕಲಿಕೆಯಲ್ಲಿ ಹಿಂದುಳಿದಿರುವಿಕೆ, ವಲಸೆ ಸೇರಿ ನಾನಾ ಕಾರಣಗಳಿಗೆ ಶಿಕ್ಷಣ ಅರ್ಧಕ್ಕೆ ನಿಂತರೂ ಮಗು ಕನಿಷ್ಠ 9ನೇ ತರಗತಿವರೆಗೆ ಓದಿರುತ್ತದೆ. ಇನ್ನು ವಯಸ್ಕರು ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಓದುವ, ಬರೆಯುವುದನ್ನು ಕಲಿತುಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿವೆ. ಆದರೆ, ಇದು ಮತ್ತಷ್ಟು ಪರಿಣಾಮಕಾರಿಯಾಗಬೇಕು. ಶೇ.95 ಕ್ಕಿಂತಲೂ ಹೆಚ್ಚಿನ ಗುರಿ ಸಾಧನೆಯಾಗಬೇಕೆಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

    ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವ ಗುರಿ ಸಾಧನೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ.
    ನಾಜೀಮಾ ಕಸ್ತೂನ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts