More

    ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಜಿ20 ಶೃಂಗಸಭೆ ವೇದಿಕೆ

    ಜಾಗತಿಕ ಸಮಸ್ಯೆಗಳ ಕುರಿತು ಬೆಳಕುಚೆಲ್ಲುವ ಮೂಲಕ ಅವುಗಳಿಗೆ ಪರಿಹಾರ ಸೂತ್ರ ಕಂಡುಹಿಡಿಯಲು ಜಿ20 ಶೃಂಗಸಭೆ ವೇದಿಕೆ ಆಗಲಿದೆ ಎಂದು ದೆಹಲಿಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್‌ನ(ಎನ್‌ಐಎಎಸ್) ಸಂಘರ್ಷ ಮತ್ತು ಸುರಕ್ಷತೆ ಅಧ್ಯಯನ ವಿಭಾಗದ ಡೀನ್ ಪ್ರೊ.ಡಿ.ಶುಭಚಂದ್ರನ್ ಹೇಳಿದರು.

    ವಿದೇಶಾಂಗ ಸಚಿವಾಲಯ, ಆರ್‌ಐಎಸ್ (ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ) ಮತ್ತು ಎನ್‌ಐಎಎಸ್ ಸಹಯೋಗದಲ್ಲಿ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಸೋಮವಾರ ಮಧ್ಯಾಹ್ನ ‘ಜಿ20- ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕ; ಯುವ ಜನತೆ ಭಾಗಿತ್ವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿವಿಧ ದೇಶಗಳು ಅಭಿವೃದ್ಧಿಯತ್ತ ಮುಖ ಮಾಡಿವೆ. ಆದರೆ, ಅವುಗಳೊಂದಿಗೆ ಹಳೆಯ ಸಮಸ್ಯೆಗಳು, ಹೊಸ ಸಮಸ್ಯೆಗಳೂ ಸೃಷ್ಟಿಯಾಗುತ್ತಿವೆ. ಇದು ಆಯಾ ಪ್ರದೇಶ, ದೇಶಕ್ಕೆ ಸೀಮಿತವಾಗಿಲ್ಲ. ಅದು ವಿವಿಧ ದೇಶಗಳಿಗೂ ಹರಡಿಕೊಂಡಿದೆ. ಇಂತಹ ವಿಶ್ವರೂಪಿ ಸಮಸ್ಯೆಗಳಿಗೆ ವಿವಿಧ ಪರಿಹಾರ ಕ್ರಮಕ್ಕಿಂತ ಒಂದು ಪರಿಹಾರ ಉಪಕ್ರಮ ಕೈಗೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಜಿ20 ಶೃಂಗಸಭೆ ಚರ್ಚಾ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಶೃಂಗಸಭೆಯನ್ನು ಮುಂದಿನ ವರ್ಷ ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಇದರಲ್ಲಿ ದೇಶದ ಯುವ ಜನರು ಪಾಲ್ಗೊಳ್ಳಬೇಕು. ಅದಕ್ಕಾಗಿ 76ನೇ ಸ್ವಾತಂತ್ರೊೃೀತ್ಸವ ಅಂಗವಾಗಿ ದೇಶದ 76 ವಿಶ್ವವಿದ್ಯಾಲಯದಲ್ಲಿ ಶೃಂಗಸಭೆ ಕುರಿತು ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು ವಿವಿಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುವ ಜನರು, ಶೈಕ್ಷಣಿಕ ತಜ್ಞರು, ಸಂಶೋಧಕರು, ಪ್ರಾಧ್ಯಾಪಕರನ್ನು ಶೃಂಗಸಭೆಯೊಂದಿಗೆ ಸಂಪರ್ಕ ಕಲ್ಪಿಸಿವುದು ಈ ರೀತಿಯ ಪೂರ್ವಭಾವಿ ಸಭೆಗಳ ಉದ್ದೇಶವಾಗಿದೆ ಎಂದರು.

    ಈ ಬಾರಿ ಭಾರತದ ಅಧ್ಯಕ್ಷತೆಯಲ್ಲಿ ಶೃಂಗಸಭೆ ನಡೆಯಲಿದೆ. ಇದು ಸರದಿ ಪ್ರಕಾರ ದೊರೆಯುವ ಅವಕಾಶವಾಗಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಘೋಷವಾಕ್ಯದಡಿ ಈ ಸಲ ಇದು ಜರುಗಲಿದೆ. ಆರ್ಥಿಕ, ಜಾಗತಿಕ ವಾಣಿಜ್ಯ ಚಟುವಟಿಕೆಗಳಿಗಷ್ಟೇ ಜಿ20 ಸೀಮಿತವಾಗಿಲ್ಲ. ಈಚಿನ ವರ್ಷಗಳಲ್ಲಿ ಸಮಸ್ಯೆಗಳಾಗಿ ಕಾಡುತ್ತಿರುವ ಜಾಗತಿಕ ಹವಾಮಾನ ವೈಪರೀತ್ಯ, ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನ, ಭಯೋತ್ಪಾದನೆ, ಪ್ರಾದೇಶಿಕ ಶಾಂತಿ ಮತ್ತು ಯುದ್ಧ ಚರ್ಚಾ ವಿಷಯವಾಗಲಿವೆ ಎಂದರು.

    ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಅವರಿಗೆ ಜಾಗತಿಕ ವಿದೇಶಾಂಗ ವ್ಯವಹಾರದ ಕುರಿತು ಅರಿವು ಇತ್ತು. ಆಗಲೇ ಜಾಗತಿಕ ನಾಯಕತ್ವ ವಹಿಸಿದ್ದರು. ವಿದೇಶಾಂಗ ನೀತಿ ಕೇವಲ ವಿದೇಶಗಳೊಂದಿಗೆ ಸೌಹಾರ್ದಯುತ ಸಂಬಂಧ, ಸಾಂಸ್ಕೃತಿಕ ವಿನಿಮಯಕ್ಕೆ ಅಷ್ಟೇ ಸೀಮಿತವಾಗದೆ ಅಭಿವೃದ್ಧಿಗೂ ಸಹಕಾರ ನೀಡಬೇಕೆಂಬುದು ಇಂದಿರಾಗಾಂಧಿ ನಿಲುವಾಗಿತ್ತು. ಈಗಲೂ ಸಹ ಈ ನಿಟ್ಟಿನಲ್ಲಿ ಭಾರತ ಸಮರ್ಥ ನಾಯಕತ್ವದಲ್ಲಿ ಸಾಗಿದೆ. ದೇಶ-ದೇಶಗಳ ನಡುವೆ ಸಹಕಾರ, ಸಹಭಾಗಿತ್ವ, ಸಕ್ರಿಯತೆ ಸಂಬಂಧವನ್ನು ವೃದ್ಧಿಸಿಕೊಳ್ಳಬೇಕಿದೆ. ಪ್ರಾದೇಶಿಕ ಅಭಿವೃದ್ಧಿ ಜಾಗತಿಕ ಅಭಿವೃದ್ಧಿ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

    ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಜಿ20 ಶೃಂಗಸಭೆ ಆಯೋಜನೆಯಿಂದ ದೇಶದ ಪ್ರವಾಸೋದ್ಯಮ, ಪಾರಂಪರಿಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಉತ್ತೇಜನ ದೊರೆಯಲಿದೆ. ದೇಶದ ಭವಿಷ್ಯವಾಗಿರುವ ಯುವ ಜನರು ಇಂತಹವೊಂದು ಮಹತ್ವ ಕಾರ್ಯಕ್ರಮದಲ್ಲಿ ತೊಡಿಸಿಕೊಳ್ಳಬೇಕು ಎಂದು ಡಿ.ಶುಭಚಂದ್ರನ್ ತಿಳಿಸಿದರು.

    ಮೈಸೂರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧ ಅಧ್ಯಯನ ವಿಭಾಗದ ಮುಖ್ಯಸ್ಥೆ, ಕಾರ್ಯಕ್ರಮದ ಸಂಚಾಲಕಿ ಡಾ.ಭಾರತಿ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts