More

    ಜಲ್ಲಿಗೇರಿ ತಾಂಡಾಕ್ಕೆ ಶಾಶ್ವತ ಪರಿಹಾರ ಒದಗಿಸಲು ನಿವಾಸಿಗಳ ಆಗ್ರಹ

    ಶಿರಹಟ್ಟಿ: ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿರುವ ತಾಲೂಕಿನ ಜಲ್ಲಿಗೇರಿ ತಾಂಡಾಕ್ಕೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ ನಾಯಕ, ನಿಗಮದ ಅಭಿವೃದ್ಧಿ ಅಧಿಕಾರಿ ಎಲ್. ಗಣೇಶ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

    ತಾಂಡಾದ ನಿವಾಸಿ ಈರಣ್ಣ ಚವ್ಹಾಣ ಮಾತನಾಡಿ, 17 ವರ್ಷಗಳಿಂದ ಇಲ್ಲಿ 60 ಬಡ ಕುಟುಂಬಗಳು ಮನೆ ಕಟ್ಟಿಕೊಂಡು ಬದುಕುತ್ತಿವೆ. ಮಳೆ ಬಂದಾಗ ಯಾತನೆ ಅನುಭವಿಸುವಂತಾಗಿದೆ. ಭಾರಿ ಮಳೆಯಾದರೆ ಪಕ್ಕದ ಗುಡ್ಡಪ್ರದೇಶದ ನೀರು ಮನೆಗಳಿಗೆ ನುಗ್ಗಿ ದವಸ-ಧಾನ್ಯ ಹಾಳಾಗುತ್ತವೆ. ಇಡೀ ತಾಂಡಾ ಜಲಾವೃತವಾಗಿ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಿಲ್ಲ’ ಎಂದು ದೂರಿದರು.

    ತಾಂಡಾದ ಕಚ್ಚಾ ರಸ್ತೆಗಳಲ್ಲಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಸಂಚರಿಸಿ ಜನರ ಪರಿಸ್ಥಿತಿ ವೀಕ್ಷಿಸಿದ ಭರತ ನಾಯಕ ಅವರು ಶಾಸಕ ರಾಮಣ್ಣ ಲಮಾಣಿ, ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಫೋನ್ ಕರೆ ಮಾಡಿ, ಜಲ್ಲಿಗೇರಿ ತಾಂಡಾಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಜನರು ನೆಮ್ಮದಿಯಿಂದ ಬಾಳುವಂತೆ ಮಾಡಿ ಎಂದು ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಗೋಣೆಣ್ಣವರ, ‘ನೀರು ಹರಿದು ಹೋಗಲು ಕಾಲುವೆ, ರಸ್ತೆ ನಿರ್ವಣಕ್ಕೆ ತಾಂಡಾ ಪಕ್ಕದ ಜಮೀನು ಮಾಲೀಕ ಪೂಜಾರ ಅವರು ಜಾಗ ನೀಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ತಾವು ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದೇನೆ’ ಎಂದು ತಿಳಿಸಿದರು.

    ಭರತ ನಾಯಕ ಮಾತನಾಡಿ, ‘ಶಾಸಕರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದು ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕರೆ ಸರಿ. ಇಲ್ಲವಾದರೆ ಈ ಬಗ್ಗೆ ತಾಂಡಾ ನಿಗಮದ ಅಧ್ಯಕ್ಷರು, ಮುಖ್ಯಮಂತ್ರಿಗಳ ಜೊತೆಗೆ ರ್ಚಚಿಸಿ ಬೇರೆಡೆ ಭೂಮಿ ಖರೀದಿಸಿ ತಾಂಡಾ ಸ್ಥಳಾಂತರ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು. ನಿಗಮದ ಅಭಿವೃದ್ಧಿ ಅಧಿಕಾರಿ ಎಲ್. ಗಣೇಶ, ವಲಯ ಕಚೇರಿ ಸಹಾಯಕ ರಾಘವೇಂದ್ರಕುಮಾರ, ಸುರೇಶ ಮಾಳಗಿಮನಿ, ವೀರಣ್ಣ ಚವ್ಹಾಣ, ಚಂದ್ರು ಲಮಾಣಿ, ಮತ್ತಪ್ಪ ಲಮಾಣಿ, ಕೃಷ್ಣ ಲಮಾಣಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts