More

    ಜರ್ಮನಿ ವಶದಲ್ಲಿರುವ ಅರಿಹಾ ವಾಪಸ್​ಗಾಗಿ ರ‍್ಯಾಲಿ, ಹುಬ್ಬಳ್ಳಿಯಲ್ಲಿ ಜೈನ್ ಸಮಾಜದಿಂದ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಏಳು ತಿಂಗಳ ಕೂಸು ಇದ್ದಾಗಲೇ ಜರ್ಮನಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಅರಿಹಾ ಎಂಬ ಬಾಲಕಿಯನ್ನು ವಾಪಸ್ ಅವರ ಭಾರತೀಯ ಕುಟುಂಬದವರಿಗೆ ಒಪ್ಪಿಸಬೇಕು. ಈ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ವಹಿಸಬೇಕೆಂದು ಆಗ್ರಹಿಸಿ ಇಲ್ಲಿಯ ಜೈನ್ ಸಮಾಜದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೆ. 30ರಂದು ಬೆಳಗ್ಗೆ 10ಕ್ಕೆ ರ‍್ಯಾಲಿ ಆಯೋಜಿಸಲಾಗಿದೆ.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈನ್ ಮರುಧರ ಸಂಘದ ಟ್ರಸ್ಟಿ ಅಮೃತ ಪೋರವಾಲ್ ಅವರು, ಕಂಚಗಾರ ಗಲ್ಲಿಯಲ್ಲಿರುವ ಜೈನ್ ಮರುಧರ ಭವನದಿಂದ ಪ್ರತಿಭಟನಾ ರ‍್ಯಾಲಿ ಹೊರಟು ತಹಸೀಲ್ದಾರ್ ಕಚೇರಿಗೆ ಆಗಮಿಸಿ ರಾಜ್ಯ-ಕೇಂದ್ರ ಸರ್ಕಾರಗಳಿಗೆ ಮನವಿ ಪತ್ರ ರವಾನಿಸಲಾಗುವುದು ಎಂದರು.

    ಹಿನ್ನೆಲೆ ಏನು?:

    ಮುಂಬೈ ಮೂಲದ ಭವೇಶ್ ಷಾ ಅವರು ಜರ್ಮನಿಯ ಘಾಟ್ಲೋಡಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಧಾರಾ ಅವರನ್ನು ವಿವಾಹವಾಗಿದ್ದಾರೆ. ಸಾಫ್ಟವೇರ್ ಇಂಜಿನಿಯರ್ ಆಗಿರುವ ಅವರು ಬರ್ಲಿನ್​ನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾರತೀಯ ದಂಪತಿಯು 2021ರಲ್ಲಿ ಅರಿಹಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಏಳು ತಿಂಗಳದ್ದಿರುವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯರ ಬಳಿ ತೋರಿಸಿದಾಗ ಚಿಕಿತ್ಸೆ ನೀಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಆ ವೈದ್ಯರು ಎರಡು ದಿನಗಳ ನಂತರ ಅಲ್ಲಿನ ಅಧಿಕಾರಿಗಳನ್ನು ಕರೆಸಿದರು. ಅವರು ಮಗುವನ್ನು ಪರಿಶೀಲಿಸಿ ದಂಪತಿ ಮೇಲೆ ದೌರ್ಜನ್ಯದ ಆರೋಪ ಹೊರಿಸಿದರು. ಇದಾದ ನಂತರ ಮಗುವನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡರು. ಭಾಷೆಯ ಸಮಸ್ಯೆಯಿಂದಾಗಿ ಅಧಿಕಾರಿಗಳಿಗೆ ಸರಿಯಾಗಿ ಮನವರಿಕೆ ಮಾಡಲು ದಂಪತಿಗೆ ಆಗಲಿಲ್ಲ. ಮುಂದೆ ಕಾನೂನು ಹೋರಾಟ ನಡೆಸಿದ ದಂಪತಿಯ ಮೇಲಿನ ಆರೋಪ ತೆರವುಗೊಳಿಸಲಾಗಿದೆ ಎಂದು ಅಮೃತ ಅವರು ಹೇಳಿದರು.

    ಇಷ್ಟೆಲ್ಲ ಆದರೂ ಮಗುವನ್ನು ಕುಟುಂಬದವರ ವಶಕ್ಕೆ ನೀಡಲು ಅಧಿಕಾರಿಗಳು ಸಿದ್ಧರಿಲ್ಲ. ಮಗುವನ್ನು ವಾಪಸ್ ಪಡೆಯಬೇಕೆಂಬ ದಿಸೆಯಲ್ಲಿ ದಂಪತಿಯ ಹೋರಾಟ ಮುಂದುವರಿದಿದೆ. ಹಾಗಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮಧ್ಯೆ ಅಧಿಕಾರಿಗಳ ವಶದಲ್ಲಿರುವ ಮಗುವಿಗೆ ಜೈನ್ ಪದ್ಧತಿಯ ಪ್ರಕಾರ ಸಸ್ಯಾಹಾರ ನೀಡಬೇಕು. ಭಾರತದ ಸಂಸ್ಕೃತಿಯಲ್ಲಿ ಮಗು ಬೆಳೆಯಬೇಕು ಎಂದು ಜೈನ್ ಸಂಘದವರು ಆಗ್ರಹಿಸಿದರು.

    ಅರಿಹಾ ಬಚಾವೋ ಅಭಿಯಾನದನ್ವಯ ರ್ಯಾಲಿಯನ್ನು ಈಗಾಗಲೇ ಬೆಂಗಳೂರು ಸೇರಿ ದೇಶದ ವಿವಿಧೆಡೆ ನಡೆಸಲಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಜೈನ್ ಸಂಘಟನೆಯ ನೂರಾರು ಜನರು ರ್ಯಾಲಿಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

    ಜೈನ್ ಸಂಘದ ಪದಾಧಿಕಾರಿಗಳಾದ ರಾಜೇಂದ್ರ ಬೀಳಗಿ, ಸಚಿನ್, ರಾಕೇಶ ಕಟಾರಿಯಾ, ಮಹೇಶ ಭಂಡಾರಿ, ದಿಲೀಪ್, ದಕ್ಷ ಜೈನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts