More

    ಜನ, ರೈತ ವಿರೋಧಿ ಕಾಯ್ದೆ ರದ್ದುಗೊಳಿಸಿ

    ಚಿತ್ರದುರ್ಗ: ಕೇಂದ್ರದ ಜನ ವಿರೋಧಿ ನೀತಿ, ರಾಜ್ಯ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶುಕ್ರವಾರ ಬೈಕ್ ರ್ಯಾಲಿ ನಡೆಸಿದರು.

    ಮುಖ್ಯ ರಸ್ತೆಗಳಲ್ಲಿ ರ್ಯಾಲಿ ಸಂಚರಿಸಿತು. ಸರ್ಕಾರಗಳ ನಡೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬೇಡಿಕೆ ಈಡೇರಿಸುವುದರ ಜೊತೆಗೆ ರೈತರು, ಜನಸಾಮಾನ್ಯರಿಗೆ ಅನುಕೂಲವಾಗುವಂತ ಯೋಜನೆ ರೂಪಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ರೈತರ ಸಾಲ ಮನ್ನಾ, ಡಾ.ಸ್ವಾಮಿನಾಥನ್ ವರದಿಯನ್ವಯ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭಾಂಶ ಸಹಿತ ಎಂಎಸ್‌ಪಿ, ನದಿ ಜೋಡಣೆಯೊಂದಿಗೆ ನೀರಾವರಿ ಸೌಲಭ್ಯ ನೀಡುವ ಕೇಂದ್ರ ಸರ್ಕಾರದ ಭರವಸೆ ಈಡೇರಿಲ್ಲ. ವಿವಿಧ ವಲಯಗಳ ಅನುದಾನ ಕಡಿತಗೊಳಿಸಿದೆ. ಆಗ್ನೇಯ ರಾಷ್ಟ್ರಗಳ ಜೊತೆಗಿನ ಒಪ್ಪಂದದಿಂದಾಗಿ ತೆಂಗು, ಅಡಿಕೆ, ಕಾಫಿ, ಮೆಣಸು, ಹಾಲು, ದ್ರಾಕ್ಷಿ, ಶೇಂಗಾ, ಸೂರ್ಯಕಾಂತಿ ಸೇರಿ ಇನ್ನಿತರೆ ಎಣ್ಣೆ ಕಾಳುಗಳ ಆಮದುವಿನಿಂದಾಗಿ ದೇಶದ ರೈತರ ಬೆಳೆಗಳ ಬೆಲೆ ಕುಸಿತವಾಗಿದೆ ಎಂದು ದೂರಿದರು.

    ವಿದ್ಯುತ್ ವಲಯ ಖಾಸಗಿಕರಣಗೊಳಿಸಿ, ಮೀಟರ್ ಅಳವಡಿಸುವ ಕ್ರಮ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡಬೇಕು. ರಾಜ್ಯ ಸರ್ಕಾರ ಕೂಡ ಕಾಮಗಾರಿಗೆ ವೇಗ ನೀಡಿ ಶೀಘ್ರ ಅನುಷ್ಠಾನಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ, ಫೆ. 5ರ ನಂತರ ಅನಿರ್ದಿಷ್ಟಾವಧಿ ಧರಣಿಗೂ ಸಿದ್ಧ ಎಂದು ಎಚ್ಚರಿಸಿದರು.

    ಬರಗಾಲದಿಂದ ರೈತರು ತತ್ತರಿಸಿದ್ದು, ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಫಸಲ್ ಬೀಮಾದಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಿ ಬೆಲೆ ಏರಿಸಿರುವುದು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಅನೇಕ ರೈತರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇವೆಲ್ಲವಕ್ಕೂ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

    ಜಿಲ್ಲಾ ಶಾಖೆಯ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ಆರ್.ಬಿ.ನಿಜಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜಪ್ಪ, ರಾಮರೆಡ್ಡಿ, ಸತೀಶ್, ಬೋರೇಶ್, ಮಂಜುನಾಥ್, ಕೆ.ಟಿ.ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts