More

    ಜನವರಿಗೆ ರಾಗಿ-ಭತ್ತ ಖರೀದಿ ಕೇಂದ್ರಗಳ ಆರಂಭ 

    ದಾವಣಗೆರೆ: ಬೆಂಬಲಬೆಲೆ ಯೋಜನೆಯಡಿ ಜನವರಿ 1ರಿಂದ ಮಾರ್ಚ್ 31ರ ವರೆಗೆ ಭತ್ತ- ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಡಿ.15ರಿಂದ 31ರವರೆಗೆ ರೈತರ ನೋಂದಣಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

    ಸೋಮವಾರ ಬೆಂಬಲ ಬೆಲೆ ಕುರಿತ ಕಾರ್ಯಪಡೆ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ದಾವಣಗೆರೆ, ಜಗಳೂರು, ಚನ್ನಗಿರಿ, ಹರಿಹರ, ಹೊನ್ನಾಳಿ ಎ.ಪಿ.ಎಂ.ಸಿ.ಗಳಲ್ಲಿ ಭತ್ತ- ರಾಗಿ ಖರೀದಿಗೆ ಅಗತ್ಯ ಕೇಂದ್ರಗಳ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
    ಈ ಬಾರಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 2,040 ರೂ., ಎ ಗ್ರೇಡ್ ಭತ್ತಕ್ಕೆ 2,060 ರೂ. ಬೆಲೆ ನಿಗದಿಯಾಗಿದೆ. ಕ್ವಿಂಟಾಲ್ ರಾಗಿಗೆ 3,578 ರೂ. ಬೆಲೆ ನಿಗದಿಯಾಗಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ 2,600 ರೂ. ದರ ಇದೆ. ರಾಗಿ ದರ 2 ಸಾವಿರ ರೂ.ನಿಂದ ರಿಂದ 2,400 ರೂ.ಇದೆ. ಹೀಗಾಗಿ ರೈತರು ಖರೀದಿ ಕೇಂದ್ರದ ಕಡೆ ಮುಖ ಮಾಡುವ ನಿರೀಕ್ಷೆ ಇದೆ ಎಂದರು.
    ಬೆಂಬಲ ಬೆಲೆಯಡಿ ರಾಜ್ಯದಲ್ಲಿ 5 ಲಕ್ಷ ಟನ್ ಭತ್ತ ಹಾಗೂ 5 ಲಕ್ಷ ಟನ್ ರಾಗಿ ಖರೀದಿಗೆ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ರೈತರು ತ್ವರಿತ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
    ಸಣ್ಣ-ಅತಿ ಸಣ್ಣ ರೈತರಿಂದ , ತಲಾ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಖರೀದಿಸಲು ಅವಕಾಶ ಇದೆ. ಭತ್ತವನ್ನು ಯಾವ ರೈತರೂ, ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಮಾರಾಟ ಮಾಡಬಹುದು ಎಂದು ವಿವರಿಸಿದರು.
    ಕಳೆದ ವರ್ಷ ತಾಂತ್ರಿಕ ತೊಡಕುಗಳಿಂದಾಗಿ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಮಾರಲು ಆಗಿರಲಿಲ್ಲ. ಈ ಬಾರಿ ತ್ವರಿತವಾಗಿ ನೋಂದಣಿ ಮಾಡಿಸಿಕೊಂಡಲ್ಲಿ ಬೆಂಬಲ ಬೆಲೆ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಅನುಕೂಲವಾಗಲಿದೆ. ರೈತರು ಫ್ರೂಟ್ ತಂತ್ರಾಂಶದಲ್ಲಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಅದರೊಂದಿಗೆ ತಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆ ನಮೂದಿಸಬೇಕು ಎಂದು ಹೇಳಿದರು.
    ಪಡಿತರ ಮೂಲಕ ವಿತರಿಸುವ ಅಕ್ಕಿಯಲ್ಲಿ ಸಾರವರ್ಧನೆ ಕಡ್ಡಾಯವಾಗಿದೆ. ಸಾರವರ್ಧನೆ ಮೂಲಕ ಕಬ್ಬಿಣ, ಬಿ-12 ಹಾಗೂ ಪಾಲಿಕ್ ಆಸಿಡ್ ಮೊದಲಾದ ಪೌಷ್ಠಿಕಾಂಶ ಸೇರ್ಪಡೆ ಮಾಡಲಾಗುವುದು. ಬೆಂಬಲ ಬೆಲೆಯಲ್ಲಿ ಅಕ್ಕಿ ಖರೀದಿಸಿದ ನಂತರ, ಸಾರವರ್ಧನೆ ವ್ಯವಸ್ಥೆ ಅಳವಡಿಸಿಕೊಂಡಿರುವ ಮಿಲ್‌ಗಳಲ್ಲಿ ಹಲ್ಲಿಂಗ್ ಮಾಡಿಸಲಾಗುವುದು ಎಂದು ಕಾಪಶಿ ತಿಳಿಸಿದರು.
    ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಆಹಾರ ಇಲಾಖೆ ಉಪ ನಿರ್ದೇಶಕಿ ನಜ್ಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಎಪಿಎಂಸಿ ಕಾರ್ಯದರ್ಶಿ ಪ್ರಭು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts