More

    ಜನರ ಸೇವೆಗಾಗಿಯೇ ಸರ್ಕಾರಿ ವೃತ್ತಿ ತ್ಯಜಿಸಿದೆ

    ಬನ್ನೂರು: ಗ್ರಾಮದ ಅಭಿವೃದ್ಧಿಯಾಗಬೇಕು. ಮೂಲಸೌಕರ್ಯ ಗ್ರಾಮೀಣ ಭಾಗದ ಜನರಿಗೆ ಸಿಗಬೇಕು. ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಜನರ ಮಾತಿಗೆ ಮನ್ನಣೆ ನೀಡಿ ರಾಜಕೀಯ ಪ್ರವೇಶ ಮಾಡಿದೆ ಎಂದು ತಿ.ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ತಿಳಿಸಿದರು.


    ಕ್ಷೇತ್ರದ ಹೋಬಳಿ ವ್ಯಾಪ್ತಿಯ ಹೊಸಹಳ್ಳಿ ಮೋಳೆ ಗ್ರಾಮದಲ್ಲಿ ಶನಿವಾರ ಜಡಿ ಮಳೆಯನ್ನೂ ಲೆಕ್ಕಿಸದೆ, ಬಿರುಸಿನ ಪ್ರಚಾರ ನಡೆಸಿದ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದರು.


    ಯಾವುದೇ ಸೌಲಭ್ಯವನ್ನು ಜನರಿಗೆ ದೊರಕಿಸಿಕೊಡಬೇಕಾದರೆ ಅಧಿಕಾರದ ಅವಶ್ಯಕತೆ ಇದೆ. ಈ ಅಧಿಕಾರವನ್ನು ನೀವು ನೀಡಿದರೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಭ್ರಷ್ಟಾಚಾರ ಕಿತ್ತೊಗೆದು ಉತ್ತಮ ರೀತಿಯಲ್ಲಿ ಸರ್ಕಾರದ ಸಲವತ್ತು ಜನರಿಗೆ ನೇರವಾಗಿ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.


    ಈಗಾಗಲೇ ಕ್ಷೇತ್ರದ ಜನರು ಎಲ್ಲರಿಗೂ ಅಧಿಕಾರದ ಗದ್ದುಗೆ ನೀಡಿದ್ದು, ಅವರು ಮಾಡಿರುವಂತಹ ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ವೈದ್ಯನಾಗಿ ಸಮಾಜ ಸೇವೆ, ಆರೋಗ್ಯ ಸೇವೆ ಮಾಡುತ್ತಾ ಬಂದಿರುವಂತ ನನಗೆ ಒಂದು ಅವಕಾಶ ನೀಡಿದರೆ, ಪ್ರತಿ ವರ್ಗದ ಜನರಿಗೂ ಉತ್ತಮ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತವನ್ನು ಜನರು ಕಣ್ಣಾರೆ ಕಂಡಿದ್ದು, ಪ್ರಪಂಚ ಮೆಚ್ಚುವಂತಹ ಕೆಲಸ ಮಾಡುತ್ತಿರುವ ಅವರ ಕೈ ಬಲಪಡಿಸಲು ಕ್ಷೇತ್ರದ ಮತದಾರರು ತಮ್ಮನ್ನು ವಿಜಯಶಾಲಿ ಮಾಡಬೇಕು ಎಂದು ಮನವಿ ಮಾಡಿದರು.


    ಈಗಾಗಲೇ ಕ್ಷೇತ್ರದ ಎಲ್ಲ ಬೂತ್‌ಗಳನ್ನು ಸಂಪರ್ಕ ಮಾಡಲಾಗಿದೆ. ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಸೌಲಭ್ಯ ಕಂಡಿರದಂತಹ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಗಮನ ನೀಡುವುದಾಗಿ ತಿಳಿಸಿದರು. ಪ್ರತಿ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ, ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹದೇವಯ್ಯ, ತಾಲೂಕು ಅಧ್ಯಕ್ಷ ಲೋಕೇಶ್ ಮುಖಂಡರಾದ ಗಿರೀಶ್, ಬಸವರಾಜು, ಮಾದೇಶ್, ದಯಾನಂದ್ ಪಟೇಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts