More

    ಜನರನ್ನು ಸುಮ್ಮನೆ ಕಚೇರಿಗೆ ಅಲೆಸದಿರಿ

    ತಿ.ನರಸೀಪುರ: ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡುವುದನ್ನು ತಪ್ಪಿಸಿ ಇಲಾಖಾ ಮಟ್ಟದಲ್ಲೇ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

    ಸಣ್ಣ ಪುಟ್ಟ ಸಮಸ್ಯೆಗಳಿಗೂ ಅವರು ಲೋಕಾಯುಕ್ತದವರೆಗೂ ಬರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು. ಸರ್ಕಾರಿ ಕೆಲಸ ದೇವರ ಕೆಲಸವೆಂಬ ಭಾವನೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರು ಸಮಸ್ಯೆಗಳನ್ನು ಒತ್ತು ತಂದ ವೇಳೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ವಿನಾಕಾರಣ ಅವರನ್ನು ಕಚೇರಿಗೆ ಅಲೆಸದೆ ಅವರ ಕೆಲಸ ಮಾಡಿಕೊಡಬೇಕು. ಸಮಸ್ಯೆ ಅಧಿಕಾರಿ ವರ್ಗದವರ ವ್ಯಾಪ್ತಿ ಮೀರಿದ್ದರೆ, ಇರುವ ವಿಷಯ ತಿಳಿಸಿ ಅವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕೇ ಹೊರತು ಸುಖಾಸುಮ್ಮನೆ ಅಲೆಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ತಿಳಿಸಿದರು.


    ಡಿವೈಎಸ್ಪಿ ಕೃಷ್ಣಯ್ಯ ಮಾತನಾಡಿ, ಪುರಸಭೆ ಹಾಗೂ ಗ್ರಾ.ಪಂ. ಪಿಡಿಒ ಗಳ ಮೇಲೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ಹೆಚ್ಚಾಗಿ ಖಾತೆಗಳನ್ನು ಮಾಡಿಕೊಟ್ಟಿಲ್ಲ ಎಂಬ ದೂರು ಹಿಡಿದು ಸಾರ್ವಜನಿಕರು ಕಚೇರಿಗೆ ಬರುತ್ತಿದ್ದಾರೆ. ಹಾಗಾಗಿ ಗ್ರಾ.ಪಂ. ಮತ್ತು ಪುರಸಭೆಯವರು ಹೆಚ್ಚಿನ ನಿಗಾವಹಿಸಿ ಸಾರ್ವಜನಿಕರ ಕೆಲಸ ಮಾಡಬೇಕಿದೆ ಎಂದರು.


    ತಾಲೂಕಿನ ಅತ್ತಹಳ್ಳಿ ಗ್ರಾಮದ ಜಯಶೀಲ ಎಂಬ ಮಹಿಳೆ ಗ್ರಾಮದಲ್ಲಿರುವ ತಮಗೆ ಸೇರಿದ ನಿವೇಶನದಲ್ಲಿ ಅಕ್ರಮ ಪ್ರವೇಶ ಮಾಡಿ ನನ್ನ ಸಂಬಂಧಿಕರೇ ದಬ್ಬಾಳಿಕೆ ನಡೆಸಿ ದನಗಳನ್ನು ಕಟ್ಟಿ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಸಂಬಂಧ ದೂರು ನೀಡಿದರೂ ಬನ್ನೂರು ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರು ನೀಡಿದರು.


    ತಾಲೂಕಿನ ಹನುಮನಾಳು ಗ್ರಾಮದ ಸರ್ವೇ ನಂ.26 ಮತ್ತು 36ರ ಸರ್ಕಾರಿ ಖರಾಬ್ ಜಾಗ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಲ್ಲಿ ತಹಸೀಲ್ದಾರ್ ಸಿ.ಜೆ.ಗೀತಾ ವಿಫಲರಾಗಿದ್ದಾರೆ ಎಂದು ರೈತ ಮುಖಂಡ ಅತ್ತಹಳ್ಳಿ ಶಿವ ನಂಜು ದೂರು ನೀಡಿದರು.


    ಅಲ್ಲದೆ ಅತ್ತಹಳ್ಳಿ ಸರ್ಕಾರಿ ಶಾಲೆಯಲ್ಲಿ ಶೌಚಗೃಹಗಳು ಗಬ್ಬೆದ್ದು ನಾರುತ್ತಿದ್ದು, ಸ್ವಚ್ಛತೆಗೆ ಗಮನಹರಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ದೂರಿದರು. ಸಮಸ್ಯೆ ಆಲಿಸಿದ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು, ಇನ್ನು 10 ದಿನಗಳೊಳಗಾಗಿ ಖರಾಬನ್ನು ತೆರವುಗೊಳಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ಶಾಲೆಗೆ ಭೇಟಿ ನೀಡಿ ಶೌಚಗೃಹ ಸ್ವಚ್ಛತೆ ಮಾಡಿಸುವಂತೆ ಬಿಇಒ ಮರಿಸ್ವಾಮಿ ಅವರಿಗೆ ಸೂಚನೆ ನೀಡಿದರು.


    ಮೂಗೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಪಟ್ಟಣದ ಆರ್‌ಎಂಸಿ ಎದುರಿರುವ ಉಪ ಬಂದೀಖಾನೆಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಂದೀಖಾನೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹೋದರಾದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರು ನೀಡಿದರು.ಇದಕ್ಕೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ದೂರು ನೀಡಿದಲ್ಲಿ ಪರಿಶೀಲಿಸಿ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುತ್ತದೆ ಎಂದರು.


    ನೋಂದಣಿ ಕಚೇರಿಯಲ್ಲಿ ಹಣ ನೀಡಿದರೆ ಮಾತ್ರವೇ ಇಸಿ ಒಂದೇ ದಿನಕ್ಕೆ ದೊರಕುತ್ತಿದ್ದು, ಇಲ್ಲದಿದ್ದಲ್ಲಿ ವಾರಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ದೂರು ಕೇಳಿಬಂತು.


    ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ರೆವಿನ್ಯೂ, ಸರ್ವೇ ಹಾಗೂ ನೋಂದಣಿ ಕಚೇರಿಗಳ ಮೇಲೆ ಸಾರ್ವಜನಿಕ ದೂರುಗಳು ಸಲ್ಲಿಕೆಯಾದವು.ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ, ಇನ್ಸ್ ಪೆಕ್ಟರ್ ಜಯರತ್ನ, ಸಿಪಿಐ ಕೃಷ್ಣಪ್ಪ, ಪಿಎಸ್‌ಐ ತಿರುಮಲ್ಲೇಶ್, ತಹಸೀಲ್ದಾರ್ ಸಿ.ಜೆ.ಗೀತಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣಕುಮಾರ್, ಸಿಡಿಪಿಒ ಭವ್ಯಾ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ, ಎಇಇ ಸುಹಾಸ್ ಇತರರು ಇದ್ದರು.

    ಮಾಹಿತಿ ಕೊರತೆ!
    ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಗ್ಗೆ ಪ್ರಚಾರದ ಕೊರತೆ ಇದ್ದ ಹಿನ್ನೆಲೆಯಲ್ಲಿ 7 ದೂರುಗಳು ಮಾತ್ರ ಸಲ್ಲಿಕೆಯಾದವು. ಅಧಿಕಾರಿಗಳು ಮಾಹಿತಿ ಕೊರತೆ ಇದ್ದ ಪರಿಣಾಮ ಕೆಲವು ಅಧಿಕಾರಿಗಳು ಅಹವಾಲು ಸಲ್ಲಿಕೆ ಮುಗಿದು ಲೋಕಾಯುಕ್ತ ಅಧಿಕಾರಿಗಳು ನಿರ್ಗಮಿಸಿದ ನಂತರ ಬಂದು ವಾಪಸ್ ತೆರಳುತ್ತಿದ್ದ ದೃಶ್ಯ ಕಂಡುಬಂತು. ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು ಹೆಚ್ಚಿನ ದೂರು ದಾಖಲಾಗಿಲ್ಲವಾದ್ದರಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಹಭಾಷ್‌ಗಿರಿ ಕೊಟ್ಟಿದ್ದು ಅಚ್ಚರಿ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts