More

    ಜನಪರ ಯೋಜನೆಗಳನ್ನು ಜಾರಿಗೆ ತಾರದೆ ಬಿಜೆಪಿ ಕಾಲಹರಣ

    ಮದ್ದೂರು: ಬಿಜೆಪಿ ಸರ್ಕಾರ ಜನಪರ ಕಾಳಜಿ ಇರುವ ಯೋಜನೆಗಳನ್ನು ಜಾರಿಗೆ ತರದೆ ಕಾಲಹರಣ ಮಾಡುತ್ತಿದ್ದು, ಅವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಎಸ್.ಗುರುಚರಣ್ ಹರಿಹಾಯ್ದರು.


    ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಂಗಳವಾರ ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಸಮಾಜ ಸಮಾವೇಶ ಸಮಾರಂಭದಲ್ಲಿ ಸಮಾಜದವರಿಗೆ ಉಚಿವಾಗಿ ಕಿಟ್ ವಿತರಿಸಿ ಮಾತನಾಡಿದರು.


    ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನವಿರೋಧಿ ಹಾಗೂ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಇವರಿಂದ ಯಾವುದೇ ವರ್ಗದ ಜನರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಅಧಿಕಾರದ ಆಸೆಗಾಗಿ ಜೆಡಿಎಸ್ ಪಕ್ಷದವರು ರೈತರ ಸಾಲ ಮನ್ನಾ ಮಾಡುತ್ತೇವೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆ. ದಲಿತ ಸಿಎಂ ಮಾಡುತ್ತೇವೆ, ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ಗೆ 23ರಿಂದ 25 ಸ್ಥಾನ ಬರೋದು ಕಷ್ಟವಾಗಿದೆ. ಆದ್ದರಿಂದ ಅವರ ಸುಳ್ಳು ಆಶ್ವಾಸನೆಗಳನ್ನು ನಂಬದೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.


    ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಪ್ರತಿ ಮನೆಗೆ 200 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಲಾಗುವುದು. ಕುಟುಂಬದ ಒಬ್ಬ ಮಹಿಳೆಗೆ 2 ಸಾವಿರ ರೂ. ಮಾಸಾಶನ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ರಾಜ್ಯ ಸರ್ಕಾರದಲ್ಲಿ ಒಂದು ರಸ್ತೆ, ಚರಂಡಿ ಮಾಡಲು ದುಡ್ಡಿಲ್ಲ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಬಿಜೆಪಿ ಜನಪರ ಕೆಲಸಗಳನ್ನು ಮಾಡದೆ ಪ್ರಚಾರದಲ್ಲಿ ತೊಡಗಿ ಜನರ ತೆರಿಗೆ ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದರು.

    ಲಂಚ ನೀಡದೆ ಯಾವ ಕೆಲಸವೂ ಆಗದು:: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರು, ಶಾಸಕರು ಸೇರಿದಂತೆ ಯಾರೇ ಆಗಲಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಲಂಚ ನೀಡಬೇಕು. ಈ ಸರ್ಕಾರದಲ್ಲಿ ನನ್ನನ್ನೂ ಲಂಚ ಕೇಳದೆ ಯಾರೂ ಬಿಟ್ಟಿಲ್ಲ. ಹಣ ನೀಡಿದರೆ ಮಾತ್ರ ನಮ್ಮ ಕೆಲಸ ಕಾರ್ಯಗಳು ಆಗುತ್ತವೆ. ನಮ್ಮ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂಬುವುದನ್ನು ನೀವೇ ಯೋಚಿಸಿ. ರಾಜ್ಯದಲ್ಲಿ ಶೇ.40 ಪರ್ಸೆಂಟ್ ಸರ್ಕಾರವಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜನಪರ ಯೋಜನೆಗಳನ್ನು ಜಾರಿ ತಂದಿದ್ದರು ಹಾಗೂ ಸರ್ಕಾರದ ಕೆಲಸಗಳನ್ನು ಮಾಡಿಸಿಕೊಳ್ಳಲು ಯಾರೂ ಲಂಚ ಕೊಡಬೇಕಾದ ಅವಶ್ಯಕತೆ ಇರಲಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ಮನವಿ ಮಾಡಿದರು.


    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ವಿನಯ್‌ರಾಮಕೃಷ್ಣ, ಅಜ್ಜಹಳ್ಳಿ ರಾಮಕೃಷ್ಣ, ನಾಗರಾಜು, ಪುಟ್ಟಸ್ವಾಮಿ, ತಿಮ್ಮಯ್ಯ, ಕಿರಣ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts