More

    ಜನಪದ ಕಲಾವಿದ ಶಂಕ್ರಣ್ಣ ಸಂಕಷ್ಟದಲ್ಲಿ

    ಸೋಮು ಲದ್ದಿಮಠ ರೋಣ

    ದೇಶ – ವಿದೇಶಗಳಲ್ಲಿ ಕನ್ನಡ ಜನಪದ ಕಲಾ ಪ್ರದರ್ಶನಗಳ ಮೂಲಕ ಗ್ರಾಮೀಣ ಕಲೆಯ ಸೊಗಡು ಹರಡಿದ ತಾಲೂಕಿನ ಕೊತಬಾಳ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಕುಟುಂಬ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

    ಜೋಗತಿ ನೃತ್ಯ, ಹಂತಿ ಪದ, ಗೀಗಿ ಪದ, ಲಾವಣಿ ಪದಗಳಲ್ಲಿ ಶಂಕ್ರಣ್ಣ ಸಿದ್ಧಹಸ್ತರು. ಹಾಡುಗಳನ್ನು ಬರೆಯುತ್ತಾರೆ. ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದರು. 2020 ಮಾರ್ಚ್ 8ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಜನಪದ ಜಾತ್ರೆ ಕಾರ್ಯಕ್ರಮಕ್ಕೆ ತೆರಳುವಾಗ ಶಂಕ್ರಣ್ಣ ಅವರ ವಾಹನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಶಂಕ್ರಣ್ಣ ಅವರ ಎಡಗಾಲು, ಎದೆಯ ಭಾಗದ ಎಲುಬು ಮತ್ತು ಬೆನ್ನುಮೂಳೆ ಮುರಿದಿತ್ತು. ಇಷ್ಟೆಲ್ಲ ಆದರೂ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸೇರಿ ಯಾರೊಬ್ಬರೂ ಸೌಜನ್ಯಕ್ಕಾದರೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ.

    ಈಗಾಗಲೇ 10 ಲಕ್ಷ ರೂ. ಸಾಲ ಮಾಡಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ ಶಂಕ್ರಣ್ಣ. ಕೈಯಲ್ಲಿರುವ ಹಣ ಖಾಲಿಯಾಗಿದೆ. ಆದರೆ, ಸಂಪೂರ್ಣ ಗುಣವಾಗದ ಕಾರಣ ಕೊತಬಾಳ ಗ್ರಾಮಕ್ಕೆ ಆಗಮಿಸಿದ್ದಾರೆ. ಶಂಕ್ರಣ್ಣ ಅವರ ಇಬ್ಬರು ಮಕ್ಕಳು ಇನ್ನೂ ಕಲಿಯುತ್ತಿದ್ದಾರೆ. ಹೀಗಾಗಿ, ಜೀವನ ನಿರ್ವಹಣೆ ಕಷ್ಟವಾಗಿದೆ.

    ಇನ್ನು ಐದು ಲಕ್ಷ ಬೇಕು: ಈಗಾಗಲೇ ಎಡಗಾಲು, ಎದೆಯ ಭಾಗದಲ್ಲಿ ಕಬ್ಬಿಣದ ರಾಡ್​ಗಳನ್ನು ಹಾಕಲಾಗಿದ್ದು, ಅವುಗಳ ನಿರ್ವಹಣೆಗೆ ಬೇಕಾಗುವ ಔಷಧೋಪಚಾರಕ್ಕೆ ಇನ್ನೂ ಐದು ಲಕ್ಷ ರೂ. ಬೇಕಾಗಿದೆ. ಈ ಹಣ ಹೊಂದಿಸಲು ಶಂಕ್ರಣ್ಣ ಸಂಕಣ್ಣವರ ಕುಟುಂಬ ಪರದಾಡುತ್ತಿದೆ. ಜನಪದ ಕಲೆಯನ್ನು ಜೀವನಾಧಾರ ಮಾಡಿಕೊಂಡ ಶಂಕ್ರಣ್ಣ ಅವರು ತಮ್ಮ ಗ್ರಾಮದಲ್ಲಿ ಕಲಾತಂಡ ಕಟ್ಟಿಕೊಂಡು ಊರೂರಿಗೆ ತೆರಳಿ ಕಾರ್ಯಕ್ರಮ ನೀಡುತ್ತಿದ್ದರು.

    ಸಂಕಷ್ಟದ ಸಂದರ್ಭದಲ್ಲಿ ತಮ್ಮಂತಹ ಕಲಾವಿದನಿಗೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ನೆರವಿಗೆ ಬರದಿರುವುದು ಶಂಕ್ರಣ್ಣ ಅವರಲ್ಲಿ ಅಸಮಾಧಾನ ಮೂಡಿಸಿದೆ.

    ನನಗೆ ಜನಪದ ಕಲೆಯೇ ಜೀವನಾಧಾರ. ನನ್ನಂತೆ ನಮ್ಮೂರಿನ ಇಪ್ಪತ್ತಕ್ಕೂ ಹೆಚ್ಚು ಯುವಕರಿಗೆ ಈ ಜನಪದ ಕಲೆಯೇ ಜೀವನಾಧಾರವಾಗಿದೆ. ಇಂತಹ ಸಂದರ್ಭದಲ್ಲಿ ನಾನು ಹಾಸಿಗೆ ಹಿಡಿದರೆ ಇನ್ನುಳಿದ ಕಲಾವಿದರು ಧೃತಿಗೆಡುತ್ತಾರೆ. ಬೇಗನೆ ಚೇತರಿಸಿಕೊಂಡು ಜನಪದ ಕಲೆಯ ಸೇವೆಗೆ ಮುಂದಾಗಬೇಕಿದೆ. ಸರ್ಕಾರ ನನ್ನ ವೈದ್ಯಕೀಯ ವೆಚ್ಚದ ಹಣ ಭರಿಸಿದರೆ, ಜನಪದ ಕಲೆ ಉಳಿಸಿ ಬೆಳೆಸಲು ಜೀವನಪರ್ಯಂತ ಶ್ರಮಿಸುತ್ತೇನೆ.

    | ಶಂಕ್ರಣ್ಣ ಸಂಕಣ್ಣವರ, ಜನಪದ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts