More

    ಜನಪದ ಕಲಾವಿದರಿಗೂ ಬೇಡಿಕೆ ಕುಸಿತ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮತದಾರ ಪ್ರಭುಗಳನ್ನು ಸೆಳೆಯಲು ರಾಷ್ಟ್ರೀಯ, ಮೈತ್ರಿ, ಪ್ರಾದೇಶಿಕ ಪಕ್ಷಗಳು ಒಳಗೊಂಡು ಆಯಾ ಪಕ್ಷಗಳ ಮುಖಂಡರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕ್ಷೇತ್ರದೊಳಗೆ ಜನರನ್ನು ಆಕರ್ಷಿಸುವ, ಸಂಭ್ರಮ ಸೃಷ್ಟಿಸುವ ವಾದ್ಯಗಳ ಸದ್ದು ಕಡಿಮೆಯಾಗಿದೆ. ಹೀಗಾಗಿ ಜನಪದ ಕಲಾವಿದರಿಗೂ ನಾಡಿನೆಲ್ಲೆಡೆ ಬೇಡಿಕೆ ಕುಸಿದಿದೆ.

    ರಾಷ್ಟ್ರ, ರಾಜ್ಯ ನಾಯಕರೊಂದಿಗೆ ಕೆಲ ಸ್ಟಾರ್ ಪ್ರಚಾರಕರು ನಿತ್ಯ ಹಲವು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುವಲ್ಲಿ ಮಾತ್ರ ಜನಪದ ಕಲಾವಿದರ ತಂಡಗಳಿಗೆ ಡಿಮಾಂಡ್ ಕಂಡು ಬರುತ್ತಿದೆ.

    ನಿಗದಿತ ಸ್ಥಳದಿಂದ ಆರಂಭವಾಗಿ ಮುಕ್ತಾಯವಾಗುವ ರೋಡ್ ಶೋಗಳಲ್ಲಿ ಭಾಷಣಕ್ಕೂ ಮುನ್ನ ಡೊಳ್ಳು, ಕಹಳೆ, ನಗಾರಿ, ಉರುಮೆ, ತಮಟೆಗಳ ಸದ್ದು ಮಾರ್ದನಿಸುತ್ತಿವೆ.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಡಿಮಾಂಡ್ ಸೃಷ್ಟಿಸಿಕೊಂಡಿದ್ದ ಜನಪದ ಕಲಾವಿದರು ರಾಜ್ಯದ ಎಲ್ಲ ತಾಲೂಕುಗಳಲ್ಲೂ ಪ್ರಚಾರದ ಭರಾಟೆ ಅಂತ್ಯವಾಗುವವರೆಗೂ ಸದ್ದು ಮಾಡಿದ್ದರು. ಆದರೆ, ಈ ಬಾರಿ ಹೇಳಿಕೊಳ್ಳುವಂತ ಬೇಡಿಕೆ ಕಂಡು ಬಂದಿಲ್ಲ. ಹೀಗಾಗಿ ಮೇ ಅಂತ್ಯದವರೆಗಿನ ಜಾತ್ರೆಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಇನ್ನುಳಿದ 14 ಕ್ಷೇತ್ರಗಳ ಎರಡನೇ ಹಂತದ ಚುನಾವಣೆ ವೇಳೆ ಒಂದಿಷ್ಟು ಡಿಮಾಂಡ್ ಉಂಟಾದಲ್ಲಿ ಒಂದಿಷ್ಟು ದುಡಿಮೆಯ ಹಾದಿ ಸುಲಭವಾಗಲಿದೆ.

    ಬಹಿರಂಗ ಸಮಾವೇಶ, ರೋಡ್ ಶೋಗಳ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಇನ್ನಿತರೆ ಪಕ್ಷಗಳ ನಾಯಕರು ಪ್ರಚಾರದ ಭರಾಟೆಗೆ ಅಣಿಯಾಗಿದ್ದು, ಮತಭೇಟೆಗಿಳಿದ ನೆಚ್ಚಿನ ನಾಯಕರ ಮನಸೆಳೆಯಲು ಅಭಿಮಾನಿಗಳು, ಕಾರ್ಯಕರ್ತರು ಇಂತಹ ಕಲಾವಿದರ ತಂಡಗಳೇ ಬೇಕೆಂದು ಕೆಲವೆಡೆ ಪಟ್ಟು ಹಿಡಿದು ಕರೆಸಿಕೊಳ್ಳುವ ಸಾಧ್ಯತೆ ಇದೆ.

    ಇತ್ತೀಚೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಈಗ ನಡೆಯುತ್ತಿರುವ ಬೃಹತ್ ರೋಡ್ ಶೋ, ಸಮಾವೇಶಗಳು ಒಳಗೊಂಡು ರಾಜ್ಯದೆಲ್ಲೆಡೆ ನಡೆಯುತ್ತಿರುವ ಪ್ರಚಾರದಲ್ಲಿ ಶೇ 25ರಷ್ಟು ಜನಪದ ಕಲಾವಿದರು ಮಾತ್ರ ತಮ್ಮ ಕಾಯಕದಲ್ಲಿ ನಿರತರಾಗಿರುವುದು ಕಂಡು ಬಂದಿದೆ.

    ವರ್ಷದಲ್ಲಿ 3 ತಿಂಗಳಷ್ಟೇ ದುಡಿಮೆ: ಸಾಮಾನ್ಯವಾಗಿ ಜಾತ್ರೆ, ಕಾರ್ತಿಕ, ಇನ್ನಿತರ ಉತ್ಸವ ಸೇರಿ ಹೆಚ್ಚು ಜನ ಸೇರುವ ಅದ್ದೂರಿ ಆಚರಣೆಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚು. ಆದರೂ ವರ್ಷದಲ್ಲಿ 3 ತಿಂಗಳು ಮಾತ್ರ ದುಡಿಮೆಗೆ ಅವಕಾಶ ದೊರೆಯುತ್ತಿದ್ದು, ಇನ್ನುಳಿದ 9 ತಿಂಗಳು ಕಾಯಕಕ್ಕೆ ಈ ಶ್ರಮ ಜೀವಿಗಳು ಪರದಾಡುವಂತಾಗಿದೆ. ಜೀವನೋಪಾಯಕ್ಕೂ ಕಷ್ಟ ಪಡುತ್ತಿದ್ದಾರೆ.

    ಹೆಚ್ಚಾಗಿ ಕೇಳದ ಸದ್ದು: ಇನ್ನೂ ಅಭ್ಯರ್ಥಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಿಗೆ ನಿತ್ಯ ಬೆಳಗ್ಗೆಯಿಂದಲೇ ಪ್ರಚಾರದಲ್ಲಿ ನಿರತರಾಗುತ್ತಿದ್ದು, ಈ ವೇಳೆ ತಮಟೆ, ಡೊಳ್ಳು ಸದ್ದು ಹೆಚ್ಚಾಗಿ ಕಂಡು ಬರುತ್ತಿಲ್ಲ. ವಿಧಾನಸಭಾ ಚುನಾವಣೆ ವೇಳೆ ವಾದ್ಯಗಳ ಸದ್ದು ಜೋರಾಗಿತ್ತು.

    ವಿಧಾನಸಭಾ ಚುನಾವಣೆ ವೇಳೆ ಮುಂಗಡವಾಗಿ ಕಾಯ್ದಿರಿಸಲಾಗುತ್ತಿತ್ತು. ಆದರೆ, ಲೋಕಸಭೆಗೆ ಅದರ ಅರ್ಧದಷ್ಟು ಡಿಮಾಂಡ್ ಕಂಡು ಬಂದಿಲ್ಲ. ಜನಪದ ಕಲೆಗಳನ್ನೇ ನಂಬಿ ಬದುಕುವವರ ಸ್ಥಿತಿ ಹೇಳತೀರದಾಗಿದೆ. ನಿತ್ಯದ ದುಡಿಮೆಗೂ ಕಷ್ಟ ಪಡುತ್ತಿದ್ದಾರೆ ಎನ್ನುತ್ತಾರೆ ಚಿತ್ರದುರ್ಗದ ಶ್ರೀಏಕನಾಥಿ, ಹನುಮಾನ್ ಡೋಲ್ ಮಾಲೀಕ ಹನುಮಂತ್.

    ಜಾತ್ರೆ, ಉತ್ಸವಗಳಲ್ಲಿ ಕಲಾವಿದರಿಗೆ ಗೌರವ ಸಿಗುತ್ತದೆ. ಆದರೆ, ಚುನಾವಣೆಗಳಲ್ಲಿ ಅದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ರಾಜ್ಯದೆಲ್ಲೆಡೆ ವಿಪರೀತ ಸುಡು ಬಿಸಿಲು ಇರುವ ಕಾರಣ ತ್ರ್ಯಾಶ್‌ ಕಲಾವಿದರ ಪೈಕಿ ಕೆಲವರು ಪ್ರಚಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ತ್ರ್ಯಾಶ್‌ ಕಲಾವಿದ ರಾಮು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts