More

    ಜನಧನ ಪಡೆಯಲು ಮುಗಿಬಿದ್ದ ಜನತೆ

    ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡ ಮಹಿಳೆಯರ ಜನಧನ ಖಾತೆಗೆ 500 ರೂ. ಜಮೆ ಮಾಡಿರುವ ಬೆನ್ನಲ್ಲೇ ಹಣ ಬಿಡಿಸಿಕೊಳ್ಳಲು ಜಿಲ್ಲೆಯ ಬಹುತೇಕ ಬ್ಯಾಂಕ್​ಗಳ ಮುಂದೆ ಗುರುವಾರ ಸಾವಿರಾರು ಜನ ಮುಗಿಬಿದ್ದಿದ್ದರು. ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಕರೊನಾ ಭೀತಿ ಹೆಚ್ಚಾಗಿತ್ತು.

    ಜನಧನ ಖಾತೆಯ ಹಣ ಪಡೆಯಲು ಲ್ಯಾಮಿಂಗ್ಟನ್ ರಸ್ತೆಯ ಬ್ಯಾಂಕ್ ಆಫ್ ಬರೋಡಾ, ಕೊಪ್ಪಿಕರ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅರವಿಂದ ನಗರದ ಕಾಪೋರೇಶನ್ ಬ್ಯಾಂಕ್, ಎಸ್​ಬಿಐ, ಅಮರಗೋಳ, ಉಣಕಲ್, ನವನಗರದ ವಿವಿಧ ಬ್ಯಾಂಕ್ ಶಾಖೆಗಳ ಮುಂದೆ ನೂರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರು. ಗ್ರಾಮೀಣ ಭಾಗದಲ್ಲೂ ಹಲವೆಡೆ ಜನ ಮುಗಿ ಬಿದ್ದಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಗುಂಪು ಗುಂಪಾಗಿ ನಿಂತಿದ್ದರಿಂದ ಕರೊನಾ ವೈರಸ್ ಹರಡುವ ಭೀತಿ ನಡುವೆ ಬ್ಯಾಂಕ್ ಸಿಬ್ಬಂದಿ ಕೆಲಸ ಮುಂದುವರಿಸಿದ್ದರು.

    ಧಾರವಾಡ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನಧನ ಖಾತೆಗಳಿದ್ದು, ಶೇ. 95ರಷ್ಟು ಮಹಿಳೆಯರಿದ್ದಾರೆ. ನವಲಗುಂದದಲ್ಲಿ ಅತಿ ಹೆಚ್ಚು ಖಾತೆಗಳಿದ್ದು, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಕುಂದಗೋಳ ಇತರ ಭಾಗದಲ್ಲಿ ಜನಧನ ಖಾತೆಗಳಿವೆ. ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ಪ್ರಧಾನಿ ಏಪ್ರಿಲ್, ಮೇ, ಜೂನ್​ನಲ್ಲಿ ಪ್ರತಿ ತಿಂಗಳು ತಲಾ 500 ರೂ. ಜಮೆ ಮಾಡುತ್ತಿದ್ದಾರೆ. ಆ ಪ್ರಕಾರ ಏಪ್ರಿಲ್ ಮಾಹೆಯ ಹಣ ಈಗಾಗಲೇ ಜಮೆಯಾಗಿದೆ ಎಂದು ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಈಶ್ವರನಾಥ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಯಾರೂ ಬ್ಯಾಂಕ್​ಗೆ ಬರಬೇಡಿ

    ಜನಧನ ಖಾತೆಯಲ್ಲಿರುವ ಹಣ ಎಲ್ಲೂ ಹೋಗುವುದಿಲ್ಲ. ಮೂರು ತಿಂಗಳ ಹಣ (1500 ರೂ.) ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಆ ಹಣ ವಾಪಸಾಗುವುದಿಲ್ಲ. ಜನಧನ ಖಾತೆ ಹೊಂದಿದವರ ಮನೆ ಬಾಗಿಲಿಗೆ ಹಣ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಲೀಡ್ ಬ್ಯಾಂಕ್ ವತಿಯಿಂದ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ಒಬ್ಬ ಬ್ಯಾಂಕ್ ಮಿತ್ರನನ್ನು ನೇಮಿಸಲಾಗಿದೆ. ಆತ ಮನೆಮನೆಗೆ ಹಣ ತಲುಪಿಸುತ್ತಾನೆ. ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಈಶ್ವರನಾಥ ಮನವಿ ಮಾಡಿದ್ದಾರೆ.

    ವದಂತಿಗೆ ಕಿವಿ ಕೊಡಬೇಡಿ

    ಜನಧನ ಖಾತೆಗೆ ಜಮೆಯಾದ ಹಣ ಬಿಡಿಸಿಕೊಳ್ಳದಿದ್ದರೆ ವಾಪಸಾಗುತ್ತದೆ ಎಂದು ಹಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಮಹಿಳೆ ಜತೆಗೆ ಮತ್ತೊಬ್ಬ ವ್ಯಕ್ತಿ ಬ್ಯಾಂಕ್​ಗೆ ಬರುತ್ತಿದ್ದಾರೆ. ಇದರಿಂದ ಜನಸಂದಣಿ ಹೆಚ್ಚಾಗುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಚಿಂತೆಗೀಡಾಗಿದ್ದಾರೆ. ಒಮ್ಮೆ ಖಾತೆಗೆ ಜಮೆಯಾದ ಹಣ ಯಾವುದೇ ಕಾರಣಕ್ಕೂ ವಾಪಸಾಗುವುದಿಲ್ಲ. ಇಂತಹ ವದಂತಿಗೆ ಕಿವಿಕೊಡಬಾರದು ಎಂದು ಲೀಡ್ ಬ್ಯಾಂಕ್ ಮನವಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts