More

    ಜಗದ್ಗುರು ಶ್ರೀ ರೇಣುಕಾಚಾರ್ಯರು ಧರ್ಮೋತ್ಥಾನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ವಿಶ್ವವಂದ್ಯರು

    ಶಿಕಾರಿಪುರ: ಜಗದ್ಗುರು ಶ್ರೀ ರೇಣುಕಾಚಾರ್ಯರು ಧರ್ಮೋತ್ಥಾನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ವಿಶ್ವವಂದ್ಯರು. ಸರ್ಕಾರ ಅಂತಹ ಮಹಾತ್ಮರನ್ನು ಅವರ ಜಯಂತಿ ಆಚರಣೆಯ ಮೂಲಕ ಸ್ಮರಣೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಎಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ, ತಾಪಂ ತಾಲೂಕು ಜಂಗಮ ಸಮಾಜ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿ, ಮಹಾತ್ಮರ ಬದುಕೇ ಹಾಗೆ. ಅವರು ದೈವಾಂಶ ಸಂಭೂತರು. ಸಮಾಜದ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿಯೇ ಆವಿರ್ಭವಿಸಿದವರು. ಅವರು ಪದವಿರಿಸಿದಲ್ಲೆಲ್ಲಾ ಶೈವ ಚಿಂತನೆಗಳನ್ನು ಹರಡಿದವರು. ಧರ್ಮದ ನೆಲೆಗಟ್ಟಿನ ಸುಂದರ ಸಮಾಜವನ್ನು ನಿರ್ಮಿಸಿ ಈ ಮಣ್ಣಿಗೆ ದೈವತ್ವದ ಧಾರೆಯೆರೆದವರು. ಮಾನವಧರ್ಮ ಪ್ರತಿಪಾದಿಸಿ ಮಾನವೀಯ ಮೌಲ್ಯಗಳನ್ನು ಹಂಚಿದ ಸಮಾಜ ಸುಧಾರಕರು ಎಂದರು.
    ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿನ ಕಲ್ಮಷಗಳನ್ನು ಕಳೆದು ಹೊಸತನ ಮೂಡಿಸಿ ನಮ್ಮಲ್ಲಿ ಚೈತನ್ಯ ತುಂಬುತ್ತವೆ, ಮನದ ಕಲ್ಮಶಗಳನ್ನು ದೂರಮಾಡಿ ನಿರ್ಮಲಗೊಳಿಸುತ್ತವೆ. ಈ ಮಣ್ಣಿನಲ್ಲಿ ಧರ್ಮ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಸಂತರು, ಮಹಾಂತರು, ದಾರ್ಶನಿಕರು ದೈವಾಂಶ ಸಂಭೂತರು, ಮಹಾತ್ಮರು ಜನಿಸಿ ಧರ್ಮೋತ್ಥಾನ ಕಾರ್ಯ ಮಾಡಿದ್ದಾರೆ, ಧರ್ಮದ ರಕ್ಷಣೆಗೆ ನಾವು ಕಟಿಬದ್ಧರಾದರೆ ಧರ್ಮ ಸದಾ ನೆರಳಂತೆ ನಿಂತು ನಮ್ಮನ್ನು ಕಾಯುತ್ತದೆ. ಧರ್ಮದ ದಾರಿಯೆಂದರೆ ಅದು ನೆಮ್ಮದಿಯ ಮತ್ತು ಪುಣ್ಯದ ದಾರಿ ಎಂದು ಹೇಳಿದರು.
    ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಜಂಗಮ ಸಮಾಜ ಅತ್ಯಂತ ಸ್ವಾಭಿಮಾನಿ ಮತ್ತು ಸಮಾಜಮುಖಿ ಸಮಾಜವಾಗಿದೆ. ತಮ್ಮ ಪೂಜೆ, ಜಪತಪ, ಆರಾಧನೆಗಳ ಮೂಲಕ ಜನಹಿತ, ಜಗತ್ಕಲ್ಯಾಣ ಬಯಸುತ್ತ ಬದುಕುತ್ತಿರುವ ಸ್ನೇಹಮಯಿ ಸಮಾಜ. ಗುರುಪರಂಪರೆಯನ್ನು ನಾಡಿಗೆ ನೀಡಿದಂತಹ ಶ್ರೇಷ್ಠ ಹಾಗೂ ವಿಶಿಷ್ಟವಾದ ಸಮಾಜ.ಇಂತಹ ಸಮಾಜ ಇನ್ನೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ನಾಡಿನ ವೀರಶೈವ ಮಠಗಳಿಗೆ ಗುರುಗಳನ್ನು ನೀಡಿದ ಹಿರಿಮೆ ಈ ಸಮಾಜದ್ದು ಎಂದು ಹೇಳಿದರು.
    ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಸಮಾಜದ ಮಠ ಮಂದಿರಗಳಿಗೆ ಸಾಕಷ್ಟು ಅನುದಾನ ನೀಡಿ ಅವುಗಳ ಅಭಿವೃದ್ಧಿ ಮಾಡಿರುವುದಲ್ಲದೆ ಸಾಕಷ್ಟು ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇಡೀ ಜಿಲ್ಲೆ ಇಂದು ಮಾಜಿ ಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸಾಮಾಜಿಕ ಕಳಕಳಿಯ ಪ್ರತೀಕವಾಗಿ ಅಭಿವೃದ್ಧಿಯಿಂದ ಪ್ರಕಾಶಿಸುತ್ತಿದೆ. ಯಡಿಯೂರಪ್ಪ ಅವರಿಗೆ ತಾಲೂಕಿನ ಮಹಾಜನತೆಯ ಆಶೀರ್ವಾದ, ಗುರುಗಳ ಅಭಯಾನುಗ್ರಹ ಇರುವುದರಿಂದ ಅವರು ತಮ್ಮ ಆಡಳಿತದಲ್ಲಿ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎನಿಸಿಕೊಂಡರು. ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts