More

    ಜಗತ್ತಿನೆಲ್ಲೆಡೆ ಪಸರಿಸಿದೆ ಭಾರತೀಯತೆ

    ಬೆಳಗಾವಿ: ಜಗತ್ತಿನ ಅನೇಕ ಭಾಷೆ-ಧರ್ಮಗಳಿದ್ದರೂ ಇಂದು ಬಹುತೇಕ ರಾಷ್ಟ್ರಗಳಲ್ಲಿನ ಜನಜೀವನ ಪದ್ಧತಿಯಲ್ಲಿ ಭಾರತೀಯತೆಯೇ ಮೈಗೂಡಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಭಾರತೀಯತೆ ದಟ್ಟವಾಗಿದ್ದು, ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಹಾಸು ಹೊಕ್ಕಾಗಿದೆ ಎಂದು ಕೊಲ್ಲಾಪುರದ ಕನ್ಹೇರಿ ಸಿದ್ದಗಿರಿಮಠದ ಜಗದ್ಗುರು ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಇಲ್ಲಿನ ಹಿಂದವಾಡಿಯಲ್ಲಿನ ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್‌ನ ಗುರುದೇವ ರಾನಡೆ ಮಂದಿರದ ಸಭಾಂಗಣದಲ್ಲಿ ಶುಕ್ರವಾರ, ಗುರುದೇವ ಡಾ.ಆರ್.ಡಿ.ರಾನಡೆ ಅವರ ಆಂಗ್ಲ ಕೃತಿಯ ಕನ್ನಡ ಅನುವಾದ ‘ಹಿಂದೀ ಸಂತ ಸಾಹಿತ್ಯದಲ್ಲಿ ಪರಮಾರ್ಥ ಮಾರ್ಗ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಲ್ಲ ಜಾತಿಗಳಲ್ಲೂ ನಾಲ್ಕು ವರ್ಣಗಳಿವೆ. ವರ್ಣಗಳಲ್ಲಿ ಯಾವುದೇ ಜಾತಿ ಇಲ್ಲ ಎನ್ನುವುದನ್ನು ಅರಿತು ನಡೆದರೆ ಎಲ್ಲರೂ ನೆಮ್ಮದಿಯ ಬದುಕು ಸಾಗಿಸಬಹುದು ಎಂದರು.
    ಸನಾತನ ಸಂಸ್ಕೃತಿಯ ಭಾರತದಲ್ಲಿ ಇದ್ದಷ್ಟು ಧರ್ಮಗಳು ಇನ್ನಾವ ದೇಶದಲ್ಲೂ ಇಲ್ಲ. ಅದರಂತೆಯೇ ಇಲ್ಲಿರುವಷ್ಟು ಶಾಂತಿ, ಸಹಬಾಳ್ವೆ ಮತ್ಯಾವ ದೇಶದಲ್ಲೂ ಇಲ್ಲ. ಎಲ್ಲವನ್ನೂ ಶಾಲೆಗಳಲ್ಲಿ ಕಲಿಸಲು ಸಾಧ್ಯವಿಲ್ಲ. ಹಬ್ಬ ಹರಿದಿನಗಳಲ್ಲಿ ಪಾಲಿಸುವ ಆಚಾರ-ವಿಚಾರ ಮೂಲಕ ನಮ್ಮ ಪೂರ್ವಜರು ಸುಸಂಸ್ಕೃತ ಆಚರಣೆಗಳ ಬುನಾದಿ ಹಾಕಿಕೊಟ್ಟಿರುವ ವ್ಯವಸ್ಥೆಯೇ ಎಲ್ಲವನ್ನೂ ಕಲಿಸಿಕೊಡುತ್ತದೆ ಎಂದು ಹೇಳಿದರು.

    ಜಗತ್ತಿನ ಅಪರೂಪದ ಸಾಹಿತ್ಯ, ವ್ಯಕ್ತಿ, ತಂತ್ರಜ್ಞಾನ ಹಾಗೂ ದರ್ಶನಗಳನ್ನು ಜಗತ್ತಿಗೆ ನೀಡಿದ ದೇಶ ಹತ್ತು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶ ಭಾರತ. ದೇಶದ ಪ್ರತಿ ರಾಜ್ಯದಲ್ಲಿಯೂ ಧೀರ, ಶೂರ, ಸಾಹಿತಿ, ದಾರ್ಶನಿಕರು, ಚಿಂತಕರ, ಶಾಸ್ತ್ರಗಳ ಜನಕ-ವಿಸ್ತಾರಕರನ್ನು ಕೊಟ್ಟಿದ್ದು, ಇಂದಿಗೂ ಈ ಪರಂಪರೆ ಮುಂದುವರಿದಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಎಂ.ಬಿ.ಜಿರಲಿ ಮಾತನಾಡಿ, ಜಗತ್ತಿನಲ್ಲಿ ನಮ್ಮ ದೇಶದ ಮಹತ್ವದ ಕುರುಹು ತತ್ತ್ವಜ್ಞಾನವೇ ಆಗಿದೆ. ಅದರಲ್ಲೂ ಗುರುದೇವ ರಾನಡೆ ಅವರು ಬರೆದ ರಾಮದಾಸರ ನಾಮಾಮೃತಗಳು ದೇಶ ಮಾತ್ರವಲ್ಲ, ಜಗತ್ತಿನಲ್ಲೇ ಹೆಸರುವಾಸಿಯಾಗಿವೆ ಎಂದು ಶ್ಲಾಘಿಸಿದರು. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಅವರ ಆಶಯದಂತೆ ಗುರುದೇವ ರಾನಡೆ ಅವರ ಕೃತಿಯನ್ನು ಕನ್ನಡಕ್ಕೆ ಶೈಲಾ ಪಾಟೀಲ ಅವರು ಅನುವಾದಿಸಿದ್ದಾರೆ. ಈ ಕೃತಿ ಮುನ್ನುಡಿಯನ್ನೂ ಸಿದ್ದೇಶ್ವರ ಸ್ವಾಮೀಜಿ ಬರೆದಿರುವುದು ಮತ್ತಷ್ಟು ಸಾರ್ಥಕತೆ ಮೂಡಿಸಿದೆ ಎಂದು ಸಂತಸ ಹಂಚಿಕೊಂಡ ಅವರು, ತತ್ವಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸಿರುವ ಗ್ರಂಥ ಹಾಗೂ ತತ್ವಜ್ಞಾನಿಗಳ ಬಗ್ಗೆ ಜಾತಿ, ಧರ್ಮ ಹಾಗೂ ದೇಶ-ವಿದೇಶದ ಮಿತಿ ಇಲ್ಲದೆ, ಅಧ್ಯಯನ ಮಾಡಿ ಸಂತ ಪರಂಪರೆಯ ವರ್ಷಕ್ಕೆ ಎರಡ್ಮೂರು ಡಜನ್ ಕೃತಿ ಅನುವಾದಿಸಲಾಗುತ್ತಿದೆ ಎಂದರು. ಲೇಖಕಿ ಶೈಲಾ ಪಾಟೀಲ, ಅಧ್ಯಕ್ಷ ಅಶೋಕ ಪೋತದಾರ, ಕಿಶೋರ್ ಕಾಕಡೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts