More

    ಛಾಯಾಗ್ರಾಹಕರ ಅಸ್ತಿತ್ವಕ್ಕೆ ತಂತ್ರಜ್ಞಾನ ಅವಶ್ಯಕ- ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್ ಹೇಳಿಕೆ 

    ದಾವಣಗೆರೆ: ಛಾಯಾಗ್ರಾಹಕರು ಇಂದಿನ ತಂತ್ರಜ್ಞಾನದ ಜತೆಗೆ ಚಾಕಚಕ್ಯತೆ ಮೂಲಕ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ. ಪ್ರಕಾಶ್ ಹೇಳಿದರು.
    ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್‌ನಲ್ಲಿ ಮಂಗಳವಾರ, ಕರ್ನಾಟಕ ರಾಜ್ಯ ವೃತ್ತಿಪರ ಛಾಯಾಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
    ತಂತ್ರಜ್ಞಾನ ಆಧಾರಿತವಾಗಿ ಛಾಯಾಗ್ರಾಹಕ ವೃತ್ತಿ ಪ್ರಚಲಿತವಾಗಿದೆ. ಇಂದಿನ ತಂತ್ರಜ್ಞಾನ ನಾಳೆಗೆ ಇರುವುದಿಲ್ಲ, ಬದಲಾಗುತ್ತಲೇ ಇರುತ್ತದೆ. ರಾಜಕೀಯ ಸಂದರ್ಭವಿರಲಿ, ಮದುವೆ- ಶುಭ ಸಮಾರಂಭಗಳೇ ಇರಲಿ, ಛಾಯಾಗ್ರಾಹಕರು ಪ್ರತಿ ಕ್ಷಣದ ಫೋಟೋ ದಾಖಲಿಸುವ ಮಟ್ಟಿಗೆ ಕುಶಲಮತಿ ಆಗಿರಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
    ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಮಾತನಾಡಿ 31 ಜಿಲ್ಲೆಯ ಪ್ರತಿನಿಧಿಗಳನ್ನು ಒಳಗೊಂಡು ಒಕ್ಕೂಟ ರಚನೆಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳ ಸಂಬಂಧ ಹಾಗೂ ಛಾಯಾಗ್ರಾಹಕರ ಬದುಕು ಉಳಿಸಲು ಹೋರಾಟ ಮಾಡೋಣ ಎಂದರು.
    ಬೆಳೆದ ತಂತ್ರಜ್ಞಾನದಿಂದಾಗಿ, ಮೊದಲೆಲ್ಲ 15-16 ಗಂಟೆ ಕತ್ತಲೆ ಕೋಣೆಯಲ್ಲಿಯೇ ಇರಬೇಕಿದ್ದ ಛಾಯಾಗ್ರಾಹಕರ ಕೆಲಸ ಬದಲಾಯಿತು. ಆದರೆ ಈ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದ ವೇಗದಿಂದಾಗಿ ಛಾಯಾಗ್ರಾಹಕರ ಬದುಕಲ್ಲಿ ಕತ್ತಲು ಆವರಿಸತೊಡಗಿತು ಎಂದು ವಿಷಾಧಿಸಿದರು.
    ನಮ್ಮ ಸಮಸ್ಯೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಂತದಲ್ಲಿ ಪರಿಹಾರ ಸಿಗದಿದ್ದಾಗ ನಾವೇ ಪರಿಹಾರ ಕಂಡುಕೊಳ್ಳಲು 2019ರಲ್ಲಿ ರಾಜ್ಯ ಮಟ್ಟದ ವೇದಿಕೆ ರಚಿಸಲು ತೀರ್ಮಾನಿಸಿದೆವು. ಅದರಂತೆ ಸಂಸ್ಥಾಪನಾ ಸಮಿತಿಯಲ್ಲಿ 20 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕರೊನಾ ಕಾರಣದಿಂದಾಗಿ ಒಕ್ಕೂಟ ಸಂಘಟನೆ ತಡವಾಯಿತು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕೆ.ರಾಮಣ್ಣ ಹಗರಿಬೊಮ್ಮನಹಳ್ಳಿ, ಶ್ರೀಧರ್ ಶಿವಮೊಗ್ಗ, ಖಜಾಂಚಿ ಚಂದ್ರಶೇಖರಯ್ಯ ಶಿರಸಿ ಇತರರಿದ್ದರು.
    ಸುಧಾ-ವಿಮಲಾ ಪ್ರಾರ್ಥನೆಗೀತೆ ಹಾಡಿದರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಜಾಧವ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಎಸ್.ಬಾಬು ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts