More

    ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಯೇ ಇಲ್ಲ!

    ಸಂಬರಗಿ: ರಾಜ್ಯದಲ್ಲಿ ಕರೊನಾ ರೌದ್ರಾವತಾರ ತೋರುತ್ತಿದೆ. ನೂರಾರು ಜನರು ಸೂಕ್ತ ಚಿಕಿತ್ಸೆ ಲಭ್ಯವಾಗದೆ ಸಾಯುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಕೈ ಮೀರಿ ಹೋಗಿದೆ. ಮಹಾರಾಷ್ಟ್ರದಿಂದ ಆಗಮಿಸುವ ಜನರಲ್ಲಿ ಕರೊನಾ ಸೋಂಕಿತರು ರಾಜ್ಯ ಪ್ರವೇಶಿಸಬಾರದು ಎಂಬ ದೃಷ್ಟಿಯಿಂದ ಸರ್ಕಾರ ಗಡಿಭಾಗದ ವಿವಿಧ ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದೆ. ಮಹಾರಾಷ್ಟ್ರದಿಂದ ಆಗಮಿಸುವ ಜನರು ಕರೊನಾ ನೆಗೆಟಿವ್ ಪ್ರಮಾಣ ಪತ್ರವಿದ್ದರೆ ಮಾತ್ರ ಅವರಿಗೆ ರಾಜ್ಯಕ್ಕೆ ಪ್ರವೇಶ ನೀಡಬೇಕು ಎಂದು ನಿಯಮವಿದೆ. ಆದರೆ, ಗಡಿಭಾಗದ ಹಲವು ಗ್ರಾಮಗಳಲ್ಲಿ ತೆರೆದಿರುವ
    ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಯೇ ಇಲ್ಲ. ಇಲ್ಲಿನ ಜನರು ಮಿರಜ್ ಹಾಗೂ ವಿವಿಧೆಡೆ ಸಂಚರಿಸುತ್ತಿದ್ದಾರೆ. ಅಲ್ಲಿನ ಜನರೂ ರಾಜಾರೋಷವಾಗಿ ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಕರೊನಾ ಹತೋಟಿಗೆ ಶ್ರಮಿಸಬೇಕಿದ್ದ ಚೆಕ್‌ಪೋಸ್ಟ್ ಸಿಬ್ಬಂದಿ ಸ್ಥಳಕ್ಕೆ ಬರುತ್ತಲೇ ಇಲ್ಲ. ಹೀಗಾಗಿ ವಾಹನ ಹಾಗೂ ಜನಸಂಚಾರ ನಿರಂತರವಾಗಿ ನಡೆದೇ ಇದೆ. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದು, ಸೋಂಕು ಪ್ರಮಾಣ ತೀರಾ ಹೆಚ್ಚಾದರೆ ನಮ್ಮ ಗತಿ ಏನು ಎಂದು ತಲೆಯ ಮೇಲೆ ಕೈಹೊತ್ತು ಕೂಡುವಂತಾಗಿದೆ.

    ಚೆಕ್‌ಪೋಸ್ಟ್ ಖಾಲಿ ಖಾಲಿ: ಅರಳಿಹಟ್ಟಿ, ಆಜೂರ, ಪಾಂಡೇಗಾಂವ, ಶಿರೂರ ಸೇರಿ ವಿವಿಧ ಪ್ರಮುಖ ರಸ್ತೆಗಳಲ್ಲಿ ತಗಡಿನ ಶೆಡ್ ನಿರ್ಮಿಸಿ ಅದನ್ನೇ ಚೆಕ್‌ಪೋಸ್ಟ್ ಆಗಿ ಮಾಡಲಾಗಿದೆ. ಈ ಮೊದಲು ಅಲ್ಲಿ ಕೆಲ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಆದರೆ, ಕರೊನಾ ಅಪಾಯ ಹಾಗೂ ಪ್ರಸರಣ ಅತ್ಯಧಿಕವಾಗುತ್ತಿರುವ ಈ ದಿನಗಳಲ್ಲೇ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಇಲ್ಲ. ಇದರಿಂದ ತಪಾಸಣೆ ಇಲ್ಲದೆ ಜನರು ಗಡಿಭಾಗದಿಂದ ಹೊರ ಹೋಗುವುದು ಹಾಗೂ ಆ ಕಡೆಯಿಂದ ಜನರು ರಾಜ್ಯ ಪ್ರವೇಶಿಸುವುದು ನಡೆಯುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಇಲ್ಲದ್ದರಿಂದ ಮಹಾರಾಷ್ಟ್ರದಿಂದ ಜನರು ಯಾವುದೇ ತರಹದ ತಪಾಸಣೆ ಇಲ್ಲದೆ ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲೇ ಕರೊನಾ ತೀವ್ರತೆಯಿಂದ ನರಳುತ್ತಿರುವ ಜನರು ಮಹಾರಾಷ್ಟ್ರದಿಂದಲೂ ಜನರು ರೋಗ ಹೊತ್ತು ಬಂದರೆ ತಮ್ಮ ಗತಿ ಏನು ಎಂದು ಭೀತಿಗೊಳಗಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ತಪಾಸಣೆಗೆ ಕ್ರಮ ಕೈಗೊಂಡರೆ ಜನರ ಜೀವ ಉಳಿಯುತ್ತದೆ. ಇಲ್ಲವಾದರೆ ಕೆಲವರ ಬೇಜವಾಬ್ದಾರಿತನದಿಂದ ಹಲವರ ಆರೋಗ್ಯ ಕೆಡಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರದ ಸಾಂಗಲಿ, ಮಿರಜ್‌ನಲ್ಲಿ ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಇಲ್ಲದ್ದರಿಂದ ಮಹಾರಾಷ್ಟ್ರದ ಜನರು ನಿರಾಯಾಸವಾಗಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಜನರಿಗೆ ಭಯ ಆವರಿಸಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜಿಸಬೇಕಿದೆ.
    | ಬಸಗೌಡ ಪಾಟೀಲ ಸಾಮಾಜಿಕ ಹೋರಾಟಗಾರ, ಸಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts