More

    ಚುನಾವಣೆ ಸಮಯದಲ್ಲಿ ಸುಳ್ಳು ಆರೋಪ

    ಹಾಸನ : ಬಗರ್‌ಹುಕುಂ ಸಾಗುವಳಿ ಪತ್ರ ಹಂಚಿಕೆಯಲ್ಲಿ ಬಹುಕೋಟಿ ರೂ.ಗಳ ಹಗರಣವಾಗಿದೆ ಎಂದು ನನ್ನ ವಿರುದ್ಧ ಚುನಾವಣೆ ಸಮಯದಲ್ಲಿ ಸುಳ್ಳು ಆರೋಪ ಮಾಡಿ ಪಿತೂರಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಆರೋಪಿಸಿದರು.


    2019 ರಿಂದ 2022 ರ ಅವಧಿಯಲ್ಲಿ 562 ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರಾಗಿದೆ. ಅನರ್ಹರಿಗೆ ಯಾವುದೇ ಭೂಮಿ ಮಂಜೂರಾಗಿಲ್ಲ. ಜತೆಗೆ ಎಚ್‌ಆರ್‌ಪಿ, ವೈಆರ್‌ಪಿ ಭೂಮಿ ಹಾಗೂ ಪಟ್ಟಣದ 3 ಕಿಮೀ ವ್ಯಾಪ್ತಿಯಲ್ಲಿ ಭೂಮಿ ಮಂಜೂರು ಮಾಡಿಲ್ಲ. ಆದರೂ ರಾಜಕೀಯ ಪ್ರೇರಿತವಾಗಿ ಕೆಲವರ ಕುತಂತ್ರದಿಂದ ಎಫ್‌ಐಆರ್ ದಾಖಲಾಗಿದೆ ಎಂದು ಶುಕ್ರವಾರ ಬೇಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.


    ಪ್ರಕರಣ ಸಂಬಂಧ ಕಾನೂನು ಹೋರಾಟ ಮಾಡುತ್ತಿದ್ದೇನೆ ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದೇನೆ. ಹೀಗಿರುವಾಗ ವಿರೋಧ ಪಕ್ಷದವರು ನಾನು, ಜೈಲಿಗೆ ಹೋಗಿದ್ದೇನೆ, ಚುನಾವಣೆಗೆ ನಿಲ್ಲಲ್ಲ ಎಂಬ ಗಾಳಿ ಸುದ್ದಿ ಹಬ್ಬಿಸುತ್ತಿದ್ದು, ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿಗಳಾಗಿವೆ. ಏ. 17 ರಂದು ಸಾವಿರಾರು ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ತೆರಳಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.


    ಬದಲಾದ ಸರ್ಕಾರ, ಅತಿವೃಷ್ಟಿ, ಕೋವಿಡ್ ನಡುವೆಯೂ ಕ್ಷೇತ್ರದಲ್ಲಿ 1800 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಎಲ್ಲ ಜಾತಿ, ಧರ್ಮದ ಜನರು ನನಗೆ ಮತ ನೀಡಿದ್ದು, ಈ ಬಾರಿಯೂ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.


    ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಜನರ ಒತ್ತಾಸೆಯಂತೆ ಕೆ.ಎಸ್.ಲಿಂಗೇಶ್ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ 1800 ಕೋಟಿ ರೂ. ಅನುದಾನ ನಮ್ಮ ಸರ್ಕಾರ ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ. 1800 ಕೋಟಿ ರೂ. ಅನುದಾನ ತಂದಿರುವುದು ನಿಜ ಎಂಬುದು ಅವರ ಮಾತಿನಲ್ಲೇ ಬಂದಿದೆ. ಸ್ಥಳೀಯ ಶಾಸಕರ ಹಿತಾಸಕ್ತಿ ಇಲ್ಲದೆ ಅನುದಾನ ತರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದರು.
    ಜೆಡಿಎಸ್ ಮುಖಂಡ ಮರಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts